ಬೆಂಗಳೂರು: ಉದ್ಯಮಿಯೊಬ್ಬನಿಗೆ 1.5ಕೋಟಿ ಬೇಡಿಕೆ ಇಟ್ಟಿದ್ದ ಐವರು ಕೇಂದ್ರದ ಜಿಎಸ್ ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಹೌದು ಅಧಿಕಾರ ಪ್ರಭಾವ ಬಳಸಿ ಉದ್ಯಮಿಯೊಬ್ಬರ ಕಂಪನಿ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿ ಅಕ್ರಮವಾಗಿ 1.5 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಆರೋಪದಡಿ ಓರ್ವ ಮಹಿಳೆ ಸೇರಿ ನಾಲ್ವರು ಜಿಎಸ್ಟಿ ಅಧಿಕಾರಿಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್, ಮನೋಜ್, ನಾಗೇಶ್ ಬಾಬು ಹಾಗೂ ಸೋನಾಲಿ ಬಂಧಿತ ಅಧಿಕಾರಿಗಳು. ಕೇಸ್ ಮುಚ್ಚಿಹಾಕುವುದಾಗಿ ಜಿಎಸ್ಟಿ ಅಧಿಕಾರಿಗಳು ಹಣ ಪಡೆದು ಬಳಿಕ ಪರಾರಿಯಾಗಿದ್ದರು. ಈ ಬಗ್ಗೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಓರ್ವ ಉದ್ಯಮಿ ದೂರು ನೀಡಿದ್ದರು.
ದೂರು ಆಧರಿಸಿ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ದಾಳಿ ರೂಪದಲ್ಲಿ ಕೃತ್ಯವೆಸಗಿದ್ದರು. ಬೆಂಗಳೂರು ನಗರ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಪಶ್ಚಿಮ ವಿಭಾಗ ಪೊಲೀಸರಿಂದ ಕಾರ್ಯಾಚರಣೆ ಮಾಡಿ ಬಂಧಿಸಲಾಗಿದೆ.



