HomeCrime News2 ತಿಂಗಳಲ್ಲಿ 1000 ಕೋಟಿ ವಹಿವಾಟು! ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ...

2 ತಿಂಗಳಲ್ಲಿ 1000 ಕೋಟಿ ವಹಿವಾಟು! ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ ಪೊಲೀಸ್!

For Dai;y Updates Join Our whatsapp Group

Spread the love

ದಾವಣಗೆರೆ: ದಾವಣಗೆರೆ ಪೊಲೀಸರು ಪತ್ತೆಹಚ್ಚಿದ್ದ ಸೈಬರ್ ವಂಚನೆ ಪ್ರಕರಣ ಇದೀಗ ರಾಜ್ಯದಲ್ಲೇ ಅತಿದೊಡ್ಡ ಸೈಬರ್ ಅಪರಾಧ ಪ್ರಕರಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆರಂಭದಲ್ಲಿ ಸುಮಾರು 150 ಕೋಟಿ ರೂಪಾಯಿ ಹಣ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದ್ದ ಈ ಪ್ರಕರಣದಲ್ಲಿ, ತನಿಖೆ ಮುಂದುವರಿದಂತೆ 1,000 ಕೋಟಿ ರೂಪಾಯಿಗೂ ಅಧಿಕ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.

ಎರಡು ತಿಂಗಳ ಹಿಂದೆ ದಾವಣಗೆರೆ ಸೈಬರ್ ಪೊಲೀಸ್ ಠಾಣೆಗೆ ಪ್ರಮೋದ್ ಎಂಬ ವ್ಯಕ್ತಿ ದೂರು ದಾಖಲಿಸಿದ್ದರು. ಕನ್‌ಸ್ಟ್ರಕ್ಷನ್ ಉದ್ಯಮ ನಡೆಸುತ್ತಿದ್ದ ಪ್ರಮೋದ್, ತನ್ನ ಬ್ಯಾಂಕ್ ಖಾತೆಯಿಂದ 52 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ತಿಳಿಸಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಪ್ರಮೋದ್ ಖಾತೆಯಿಂದಲೇ ಸುಮಾರು 150 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿರುವುದನ್ನು ಪತ್ತೆಹಚ್ಚಿದ್ದರು.

ತನಿಖೆ ಮುಂದುವರಿದಂತೆ ಆರಂಭದಲ್ಲಿ ಸಂತ್ರಸ್ತನಾಗಿದ್ದ ಪ್ರಮೋದ್‌ನೇ ಪ್ರಕರಣದ ಪ್ರಮುಖ ಆರೋಪಿಯಾಗಿರುವುದು ಗೊತ್ತಾಗಿದೆ. ವಿಚಾರಣೆಯಲ್ಲಿ ಆತನ ಖಾತೆಗೆ ಜಮೆಯಾದ ಹಣ ಅನಾಮಧೇಯ ಮೂಲಗಳಿಂದ ಬಂದಿರುವುದು ಹಾಗೂ ಯಾವುದೇ ಉದ್ಯಮ ಇಲ್ಲದಿದ್ದರೂ ಕರೆಂಟ್ ಅಕೌಂಟ್ ತೆರೆಯಲಾಗಿದ್ದುದೂ ಬಹಿರಂಗವಾಗಿದೆ.

ಪೊಲೀಸರ ತನಿಖೆಯಲ್ಲಿ ಕರೆಂಟ್ ಅಕೌಂಟ್‌ಗಳನ್ನು ತೆರದು ಅವುಗಳನ್ನು ಇತರರಿಗೆ ಮಾರಾಟ ಮಾಡುವ ದೊಡ್ಡ ಜಾಲವೊಂದು ಬಯಲಾಗಿದೆ. ದುಬೈ ಸೇರಿದಂತೆ ವಿದೇಶಗಳಿಂದ ಕೋಟಿ ಕೋಟಿ ರೂಪಾಯಿ ಹಣ ಈ ಖಾತೆಗಳಿಗೆ ಜಮೆಯಾಗುತ್ತಿದ್ದು, ಆನ್‌ಲೈನ್ ಗೇಮಿಂಗ್, ಗ್ಯಾಂಬ್ಲಿಂಗ್, ನಕಲಿ ಟ್ರೇಡಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳಿಂದ ಹಣ ಹರಿದುಬರುತ್ತಿದ್ದ ಮಾಹಿತಿ ಲಭ್ಯವಾಗಿದೆ.

ಪ್ರಮೋದ್ ತನ್ನ ಕರೆಂಟ್ ಅಕೌಂಟ್ ಅನ್ನು ಇತರರಿಗೆ ಬಳಕೆಗೆ ನೀಡಿ ಕಮಿಷನ್ ಪಡೆಯುತ್ತಿದ್ದನೆಂದು ತಿಳಿದುಬಂದಿದೆ. ಆದರೆ ಜಮೆಯಾದ ಹಣಕ್ಕೆ ಕಮಿಷನ್ ನೀಡದ ಕಾರಣ ತನ್ನ ಖಾತೆಯಲ್ಲಿದ್ದ ಹಣವನ್ನು ವಂಚಕರು ಕದ್ದಿದ್ದಾರೆ ಎಂದು ಆತ ದೂರು ನೀಡಿದ್ದಾನೆ ಎಂಬುದೂ ತನಿಖೆಯಲ್ಲಿ ಸ್ಪಷ್ಟವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ಬೇಲೂರು ಮೂಲದ ಅರ್ಫಾತ್ ಪಾಷಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅರ್ಫಾತ್ ಖಾತೆಯಲ್ಲಿ ಇದ್ದ 18 ಕೋಟಿ ರೂಪಾಯಿ ಹಣವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಲ್ಲದೆ, ಕಳೆದ ಎರಡು ತಿಂಗಳಲ್ಲಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ 132 ಕೋಟಿ ರೂಪಾಯಿ ಹಣವನ್ನು ಅರ್ಫಾತ್ ವಿತ್‌ಡ್ರಾ ಮಾಡಿಕೊಂಡಿದ್ದ ಅಚ್ಚರಿಯ ಮಾಹಿತಿಯೂ ತನಿಖೆಯಲ್ಲಿ ಬಹಿರಂಗವಾಗಿದೆ. ಅರ್ಫಾತ್ ನೀಡಿದ ಮಾಹಿತಿಯ ಆಧಾರದಲ್ಲಿ ಗುಜರಾತ್‌ನ ಅಹಮದಾಬಾದ್ ಮೂಲದ ಸಂಜಯ್ ಕುಂದ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!