ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ 2023-2024ರಲ್ಲಿ ಒಟ್ಟೂ 2478 ಅಭ್ಯರ್ಥಿಗಳು ಯುವನಿಧಿ ಯೋಜನೆಗೆ ನೋಂದಣಿ ಮಾಡಿಸಿದ್ದು, ಅವರಿಗೆ 4.12 ಕೋಟಿ ರೂ. ಮೊತ್ತವನ್ನು ಡಿ.ಬಿ.ಟಿ. ಮೂಲಕ ಸಂದಾಯಿಸಲಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ನಾಗಾವಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯ ಐತಿಹಾಸಿಕ ಪಾರಂಪರಿಕ ಲಕ್ಕುಂಡಿಯು ಸಾಂಸ್ಕೃತಿಕ, ಐತಿಹಾಸಿಕ, ಶಿಲ್ಪಕಲಾ ನೈಪುಣ್ಯತೆ ತನ್ನದೇ ಆದ ಛಾಪು ಮೂಡಿಸಿದೆ. 2025ರ ಜನೇವರಿ 26ರಂದು ಜರುಗುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ರಾಜ್ಯದಿಂದ ಐತಿಹಾಸಿಕ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಸ್ತಬ್ಧಚಿತ್ರವು ಆಯ್ಕೆಯಾಗಿದ್ದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ಲಕ್ಕುಂಡಿ ಪ್ರಾಚ್ಯಾವಶೇಷಗಳ ಅನ್ವೇಷಣೆಯನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಲಕ್ಕುಂಡಿಯ ಕುರಿತು ತಿಳುವಳಿಕೆ ನೀಡುವ ಮಹತ್ತರವಾದ ಕೆಲಸವನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಲಕ್ಕುಂಡಿಯು ಮಹತ್ವ ಪಡೆದಿದ್ದು, ಬೆಳಗಾವಿ ಅಧಿವೇಶನದಲ್ಲಿ ನಡೆದ ಸಚಿವ ಸಂಪುಟದಲ್ಲಿ ಲಕ್ಕುಂಡಿ ಅಭಿವೃದ್ಧಿಗಾಗಿ 5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ಗದಗ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸಲಾಗುತ್ತಿದೆ. ಒಂದು ವೇಳೆ ನಗರದಲ್ಲಿ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರವಾಣಿ ಕರೆಗಳು ಬಂದಲ್ಲಿ ಅಂತಹ ಪ್ರದೇಶಗಳಲ್ಲಿ ತಕ್ಷಣವೇ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು. ಜಿಲ್ಲಾಧಿಕಾರಿಗಳಿಗೆ ನೀರಿನ ಪೂರೈಕೆಗೆ ಸಂಬAಧಿಸಿದAತೆ ಪೈಪ್‌ಲೈನ್‌ಗಳ ರಿಪೇರಿ ಕಾರ್ಯಗಳನ್ನು ತುರ್ತು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧು ಪಾಟೀಲ, ಬಸವರಾಜ ಕಡೆಮನಿ ಸೇರಿದಂತೆ ಇತರರು ಇದ್ದರು.
ರೈತರಿಗೆ ಬರುವ ಬೆಳೆ ವಿಮೆ ಹಣ ಪೂರ್ಣ ಪ್ರಮಾಣದಲ್ಲಿ ಅವರಿಗೇ ತಲುಪಬೇಕು. ಒಂದು ವೇಳೆ ಈ ಮಧ್ಯದಲ್ಲಿ ಬ್ಯಾಂಕ್ ಮ್ಯಾನೇಜರ್, ವರ್ತಕರು, ದಲ್ಲಾಳಿಗಳು ಏನಾದರೂ ಸಂಭಾವನೆ ಕೇಳಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.



