ಬೆಂಗಳೂರು:- ಬೆಂಗಳೂರಿನ ಹೆಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆ ಬಿದ್ದು ಮಗು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಮನುಶ್ರೀ ಅಲಿಯಾಸ್ ಪಾರು(4) ಸಾವನ್ನಪ್ಪಿರುವ ಮಗು. ಮತ್ತಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಸಿಮೆಂಟ್ ಶೀಟ್ನ ಶೆಡ್‌ನಲ್ಲಿ ಕುಟುಂಬ ವಾಸವಾಗಿತ್ತು. ಗಾಯಾಳು ಮಕ್ಕಳಾದ ಶ್ರಿಯನ್ (6) ಮತ್ತು ಶೇಖರ್(5)ರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿರ್ಮಾಣ ಹಂತದ ಕಟ್ಟಡವು ಶ್ರೀನಿವಾಸುಲು ಎಂಬುವವರಿಗೆ ಸೇರಿದೆ. ನಿರ್ಮಾಣ ವೇಳೆ ಅಗತ್ಯವಾದ ಸುರಕ್ಷತಾ ಕ್ರಮಗಳು ಹಾಗೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. 4ನೇ ಮಹಡಿ ಮೇಲಿಂದ ಸುಮಾರು 10 ರಿಂದ 12 ಸಿಮೆಂಟ್ ಇಟ್ಟಿಗೆ ಬಿದ್ದಿವೆ. ಇಟ್ಟಿಗೆ ಬಿದ್ದ ರಭಸಕ್ಕೆ ಮನೆಯ ಶೀಟ್ ಸಂಪೂರ್ಣ ಧ್ವಂಸವಾಗಿದೆ. ಮನೆಯಲ್ಲಿದ್ದ ಮಗುವಿನ ಮೇಲೆ ಬಿದ್ದ ಪರಿಣಾಮ ಮೃತಪಟ್ಟಿದೆ.
ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ಕೈಗೊಂಡಿದ್ದಾರೆ.



