ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಬರ್ದ್ವಾನ್ ಜಿಲ್ಲೆಯ ಮೆಮರಿ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ-19ರ ಫ್ಲೈಓವರ್ ಗೋಡೆ ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ.
ಕೇವಲ ಆರು ತಿಂಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಈ ಫ್ಲೈಓವರ್‌ನ ಭಾಗ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಹಿತಿ ಪ್ರಕಾರ, ರಸ್ತೆಯ ಸುಮಾರು 50ರಿಂದ 60 ಅಡಿಗಳಷ್ಟು ಭಾಗ ಕುಸಿದು ಬಿದ್ದಿದ್ದು, ಕೊಲ್ಕತ್ತಾಕ್ಕೆ ಹೋಗುವ ಲೇನ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಜನಸಂಚಾರ ಹೆಚ್ಚಿರುವ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಅಚಾನಕ್ ಗೋಡೆ ಕುಸಿದ ಪರಿಣಾಮ ಸ್ಥಳದಲ್ಲಿದ್ದ ಪಾದಚಾರಿಗಳು ಹಾಗೂ ವಾಹನ ಸವಾರರು ಭಯಭೀತರಾದರು.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಆಡಳಿತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಇದೀಗ ಫ್ಲೈಓವರ್ ನಿರ್ಮಾಣದಲ್ಲಿ ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.



