ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಸಂಘರ್ಷದ ನಡುವೆಯೇ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ನಾಲ್ಕು ಪಟ್ಟು ಹೆಚ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಕ್ಷಣಾ ಕಂಪನಿಗಳಿಗೆ ಆದೇಶ ನೀಡಿದ್ದಾರೆ.
ಈ ಸಂಬಂಧ ಶುಕ್ರವಾರ ಟ್ರಂಪ್ ದೇಶದ ಪ್ರಮುಖ ರಕ್ಷಣಾ ಉತ್ಪಾದನಾ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಗಳಿಗೆ ನಿರ್ದೇಶನ ನೀಡಲಾಗಿದ್ದು, ಕಂಪನಿಗಳು ಈ ಸೂಚನೆಗೆ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಇದೇ ವೇಳೆ ಹಲವು ಹೊಸ ಉತ್ಪಾದನಾ ಘಟಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಅಮೆರಿಕ ಪ್ರಸ್ತುತ ಉನ್ನತ ಮತ್ತು ಮಧ್ಯಮ ದರ್ಜೆಯ ಯುದ್ಧ ಸಾಮಗ್ರಿಗಳನ್ನು ತಯಾರಿಸುತ್ತಿದ್ದು, ಇವುಗಳನ್ನು ಇರಾನ್ ಮತ್ತು ವೆನೆಜುವೆಲಾದಲ್ಲಿ ನಡೆದ ಇತ್ತೀಚಿನ ಕಾರ್ಯಾಚರಣೆಗಳಲ್ಲಿ ಬಳಸಲಾಗಿದೆ.
ದೀರ್ಘಕಾಲದ ಯುದ್ಧ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಉತ್ಪಾದನೆ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಯುದ್ಧ ಇನ್ನಷ್ಟು ಸುಧೀರ್ಘವಾಗುವ ಸಾಧ್ಯತೆ ಇದೆ ಎಂಬ ಆತಂಕ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುತ್ತಿದೆ.
ಇದೀಗ ಯುದ್ಧದ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಸೌದಿ ಅರೇಬಿಯಾದ ಕಚ್ಚಾತೈಲ ನಿಕ್ಷೇಪಗಳನ್ನು ಗುರಿಯಾಗಿಸಿಕೊಂಡಿದೆ. ಶೈಬಾ ತೈಲ ನಿಕ್ಷೇಪದ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಯನ್ನು ಸೌದಿ ಅರೇಬಿಯಾ ವಿಫಲಗೊಳಿಸಿದೆ. ಜೊತೆಗೆ ಇರಾಕ್‌ನ ದಕ್ಷಿಣ ಬಸ್ರಾ ಪ್ರಾಂತ್ಯದಲ್ಲಿರುವ ತೈಲ ನಿಕ್ಷೇಪಗಳ ಮೇಲೂ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಡ್ರೋನ್ ದಾಳಿಗಳ ಸಮಸ್ಯೆಯನ್ನು ಎದುರಿಸುತ್ತಿರುವ ಅಮೆರಿಕ, ಅವುಗಳನ್ನು ತಡೆಯಲು ಸುಧಾರಿತ ಡ್ರೋನ್ ವಿರೋಧಿ ರಕ್ಷಣಾ ವ್ಯವಸ್ಥೆಗಾಗಿ ಯುಕ್ರೇನ್ ಸಹಾಯವನ್ನು ಕೇಳಿದೆ. ಮಧ್ಯಪ್ರಾಚ್ಯದಲ್ಲಿ ರಷ್ಯಾ ಡ್ರೋನ್ ದಾಳಿಗಳನ್ನು ಯುಕ್ರೇನ್ ಯಶಸ್ವಿಯಾಗಿ ತಡೆದ ಅನುಭವ ಹೊಂದಿರುವ ಹಿನ್ನೆಲೆ ಅಮೆರಿಕ ಈ ಕ್ರಮ ಕೈಗೊಂಡಿದೆ.



