HomeEducationಗುರುಗಳು ಕಲಿಸಿದ ಶಿಸ್ತು ಜೀವನ ರೂಪಿಸಿದೆ : ಚಂದ್ರು ಲಮಾಣಿ

ಗುರುಗಳು ಕಲಿಸಿದ ಶಿಸ್ತು ಜೀವನ ರೂಪಿಸಿದೆ : ಚಂದ್ರು ಲಮಾಣಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ : ನನ್ನ ವಿದ್ಯಾರ್ಥಿ ಜೀವನದಲ್ಲಿ ನೀವು ಕಲಿಸಿದ ಶಿಸ್ತು, ಪಾಠವೇ ಇಂದು ನಾನು ಶಾಸಕ ಸ್ಥಾನದಲ್ಲಿರಲು ಕಾರಣ. ನಿಮ್ಮ ಈ ಋಣವನ್ನು ನಾನೆಂದಿಗೂ ಮರೆಯಲಾರೆ ಎಂದು ಶಿರಹಟ್ಟಿಯ ಶಾಸಕ ಚಂದ್ರು ಲಮಾಣಿ ನುಡಿದರು.

ಶಿರಹಟ್ಟಿಯ ಶಾಸಕ ಚಂದ್ರು ಲಮಾಣಿಯವರು 2003-04ರಲ್ಲಿ ಮುಂಡರಗಿ ತಾಲೂಕಿನ ಡೋಣಿ ಸರಕಾರಿ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿಯವರೆಗೆ ಓದಿದವರು. ಆಗ ಅಲ್ಲಿ ದೈಹಿಕ ಶಿಕ್ಷಕರಾಗಿದ್ದವರು ಈಗ ನರೇಗಲ್ಲದ ಕೆ.ಆರ್. ಕುಲಕರ್ಣಿ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಆರ್.ಎಸ್. ನರೇಗಲ್ಲರವರು. ಅವರನ್ನು ಹುಡುಕಿಕೊಂಡು ನರೇಗಲ್ಲದ ಅವರ ಮನೆಗೆ ಬಂದ ಶಾಸಕ ಚಂದ್ರು ಲಮಾಣಿ, ತಮ್ಮ ಗುರು ಭಕ್ತಿಯನ್ನು ತೋರ್ಪಡಿಸಿದ್ದು ಹೀಗೆ.

ಶಾಸಕರಾದ ನಂತರ ಬಿಡುವು ಮಾಡಿಕೊಂಡು ಗುರುವಿನ ಆಶೀರ್ವಾದ ಪಡೆಯಲು ನರೇಗಲ್ಲದ ಆರ್.ಎಸ್. ನರೇಗಲ್ಲರವರ ಮನೆಗೆ ಬಂದ ಶಾಸಕ ಚಂದ್ರು ಲಮಾಣಿ, ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು.

ಮೊದಲು ನಾನು ವಿದ್ಯಾಭ್ಯಾಸದ ಬಗ್ಗೆ ಅಷ್ಟೊಂದು ಒಲವು ಹೊಂದಿರಲಿಲ್ಲ. ಮನೆಯಲ್ಲಿನ ಬಡತನದಿಂದ ನಾನು ಡೋಣಿಯ ಬಿಸಿಎಂ ಹಾಸ್ಟೆಲ್‌ನಲ್ಲಿದ್ದು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದೆ. ನನ್ನಲ್ಲಿದ್ದ ಜಾಣತನವನ್ನು ಹೊರ ತೆಗೆದ ಆಗಿನ ಡೋಣಿ ಸರಕಾರಿ ಪ್ರೌಢಶಾಲೆಯ ನನ್ನ ಶಿಕ್ಷಕ ಬಳಗ ನನ್ನಲ್ಲಿ ಓದುವ ಹವ್ಯಾಸವನ್ನು ಮೂಡಿಸಿತು. ಹೀಗಾಗಿ ಪ್ರೌಢಶಾಲೆಯಲ್ಲಿ ಚೆನ್ನಾಗಿ ಅಂಕಗಳನ್ನು ಪಡೆದ ನಾನು ಮುಂದೆ ಹೆಚ್ಚಿನ ಓದನ್ನು ಓದಿ ವೈದ್ಯನಾಗುವ ಹಂತಕ್ಕೂ ಬಂದೆ. ವೈದ್ಯನಾಗಿಯೂ ಸಹ ನಾನು ಸರಕಾರಿ ಆಸ್ಪತ್ರೆಯಲ್ಲಿ ಅನೇಕ ವರ್ಷಗಳ ಕಾಲ ಜನರ ಸೇವೆಯನ್ನು ಮಾಡಿದೆ. ಅಂದಿನ ಗುರುಗಳ ಮಾರ್ಗದಶನದಿಂದಲೇ ನಾನಿಂದು ಉನ್ನತ ಸ್ಥಾನವನ್ನು ತಲುಪಿದ್ದೇನೆ. ಅವರೆಲ್ಲರಿಗೂ, ವಿಶೇಷವಾಗಿ ನನಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ತಿಳಿಸಿದ ನಿಮಗೂ ನನ್ನ ಹೃತ್ಪೂರ್ವಕ ಅಭಿವಂದನೆಗಳು ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು.

ಮನೆಗೆ ಬಂದ ಶಾಸಕರನ್ನು ಆದರದಿಂದ ಬರಮಾಡಿಕೊಂಡ ದೈಹಿಕ ಶಿಕ್ಷಕ ಆರ್.ಎಸ್. ನರೇಗಲ್ಲರವರು, ಕುಟುಂಬದ ಪರವಾಗಿ ಶಾಸಕರನ್ನು ಶಾಲು ಹೊದೆಸಿ ಸನ್ಮಾನಿಸಿ, ಆಶೀರ್ವದಿಸಿದರು. ಆ ಸಮಯದಲ್ಲಿ ಏನು ಮಾಡಬೇಕಿತ್ತೋ ಆ ಕರ್ತವ್ಯವನ್ನು ನಾವು ಮಾಡಿದ್ದೇವೆ. ನಮ್ಮ ಶಿಕ್ಷೆ, ದಂಡನೆಯನ್ನು ಸಹಿಸಿಕೊಂಡು ಉತ್ತಮ ಅಧ್ಯಯನ ಮಾಡಿ ಚಂದ್ರು ಲಮಾಣಿಯವರು ವೈದ್ಯರಾದರು. ಈಗ ಅವರು ಜನರ ಒಲವನ್ನು ಪಡೆದು ಶಾಸಕರಾಗಿದ್ದಾರೆ. ಉನ್ನತ ಸ್ಥಾನಗಳಿಗೆ ಹೋದ ಮೇಲೆ ಕಲಿಸಿದ ಗುರುಗಳನ್ನು ಮರೆಯುವವರು ಅದೆಷ್ಟೋ ಜನ. ಆದರೆ ಚಂದ್ರು ಲಮಾಣಿಯವರು ಶಾಸಕರಿದ್ದೂ ಸಹ ನೆನಪು ಮಾಡಿಕೊಂಡು ಬಂದು ಇಂದು ನಮ್ಮ ಆಶೀರ್ವಾದ ಪಡೆದುಕೊಂಡಿರುವುದು ಅವರ ಸರಳ ವ್ಯಕ್ತಿತ್ವವನ್ನು ತೋರಿಸುತ್ತದೆ.

ಹಿರಿಯರನ್ನು, ಗುರುಗಳನ್ನು ಗೌರವಿಸುವ ಗುಣಗಳನ್ನು ಶಾಸಕರು ಹೊಂದಿದ್ದಾರೆ. ನಮ್ಮ ದೇಶದಲ್ಲಿ ಗುರು-ಶಿಷ್ಯ ಪರಂಪರೆಗೆ ಇನ್ನೂ ಅರ್ಥವಿದೆ ಎಂಬುದನ್ನು ಇದು ತೋರಿಸುತ್ತದೆ. ಶಾಸಕರ ಈ ಗುಣ ಅತೀವ ಸಂತಸವನ್ನುಂಟು ಮಾಡಿದೆ. ಅವರಿಗೆ ಶುಭವಾಗಲಿ ಎಂದು ಶಿಕ್ಷಕ ನರೇಗಲ್ಲ ಹಾರೈಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ರಟ್ಟಿಹಳ್ಳಿ, ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ, ಶಿಕ್ಷಕ ವಿ.ಎ. ಕುಂಬಾರ, ಪತ್ರಕರ್ತರಾದ ಉಮೇಶ ನವಲಗುಂದ, ಎನ್.ಕೆ. ಬೇವಿನಕಟ್ಟಿ ಮುಂತಾದವರಿದ್ದರು.

ಅಂದಿನ ದಿನಗಳಲ್ಲಿ ನೀವು ನಮ್ಮನ್ನು ಶಿಕ್ಷಿಸಿ, ಸರಿಯಾಗಿ ಶಿಸ್ತನ್ನು ಬೆಳೆಸಿದ್ದರ ಪರಿಣಾಮವಾಗಿ ನಾನು ವಿದ್ಯಾಭ್ಯಾಸದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದೆ. ಇದರಿಂದ ಮೊದಲು ನಾನು ವೈದ್ಯನಾದೆ. ನಂತರ ಈಗ ಶಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೆಲ್ಲ ನಿಮ್ಮ ಆಶೀರ್ವಾದವೇ ಕಾರಣ ಎಂದು ಶಾಸಕ ಡಾ. ಚಂದ್ರು ಲಮಾಣಿ ನರೇಗಲ್ಲ ಶಿಕ್ಷಕರ ಕಾಲಿಗೆರಗಿದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img