HomeGadag Newsಸರ್ಕಾರಿ ಶಾಲೆಗಳು ನಾಯಕತ್ವದ ಗುಣ ಬೆಳೆಸುತ್ತವೆ

ಸರ್ಕಾರಿ ಶಾಲೆಗಳು ನಾಯಕತ್ವದ ಗುಣ ಬೆಳೆಸುತ್ತವೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸರ್ಕಾರಿ ಶಾಲೆಗಳು ಶೈಕ್ಷಣಿಕ ಸಾಧನೆ ಹಾಗೂ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಮನೋಭಾವ, ಧನಾತ್ಮಕ ಚಿಂತನೆಯೊಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ಇದರಿಂದಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಗಟ್ಟಿಗೊಳ್ಳುತ್ತದೆ ಎಂದು ಗದಗ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಉಪನ್ಯಾಸಕಿ ಸುಧಾ ಬೆನಕಲ್ ಹೇಳಿದರು.
ಅವರು ಗುರುವಾರ ಗದಗ ಜಿಲ್ಲಾ ಅಖಿಲ ಭಾರತ ಶರಣ ಸಂಕುಲನದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಗದುಗಿನ ಆದರ್ಶ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 9ರಲ್ಲಿ ಜರುಗಿದ ಶ್ರಾವಣದ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಮಕ್ಕಳು ಪಠ್ಯದೊಂದಿಗೆ ಆಟಪಾಠಗಳಲ್ಲಿ ಪಾಲ್ಗೋಳ್ಳಬೇಕು. ಇದರಿಂದ ಮನಸ್ಸು ಉಲ್ಲಸಿತಗೊಂಡು ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ ಎಂದರು.
ಮುಖ್ಯ ಅತಿಥಿ, ನಿವೃತ್ತ ಉಪನ್ಯಾಸಕಿ ಪ್ರೊ. ಪಿ.ಬಿ. ಹಿರೇಮಠ ಮಾತನಾಡಿ, ಸಮಾಜ ಹಾಗೂ ಸಂಘಟನೆಗಳು ಸರ್ಕಾರಿ ಶಾಲೆಯ ಬಲವರ್ಧನೆಗೆ ಒಟ್ಟಾಗಿ ಕೈ ಜೋಡಿಸಬೇಕು. ಇಲ್ಲಿಯ ಗುಣಮಟ್ಟದ ಶಿಕ್ಷಣದ ಬಗೆಗೆ ಪಾಲಕರಿಗೆ ಮನವರಿಕೆ ಮಾಡಬೇಕೆಂದರು.
ಕಲಿಕಾ ಸಾಮಗ್ರಿಗಳನ್ನು ವಿತರಿಸಿದ ಚಿಂತಕಿ ಸುವರ್ಣಾ ಗುರಮ್ಮನವರ ಮಾತನಾಡಿ, ಮಕ್ಕಳು ಒಳ್ಳೆಯ ಮಾತು, ಉತ್ತಮ ನಡತೆ ಹಾಗೂ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಿಕೊಂಡು ಮನೆಯ ಹಿರಿಯರ, ಶಾಲಾ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯೆ ನಿರ್ಮಲಾ ಚಿತ್ತಾಮೂರ ಮಾತನಾಡಿ, ಸಂಘಟನೆಗಳು ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಚೈತನ್ಯ ತುಂಬಲು ಸಿಹಿಭೋಜನದೊಂದಿಗೆ ಕಲಿಕಾ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಕ್ಕಳೊಂದಿಗೆ ಸಹಭೋಜನ ಮಾಡುತ್ತಿರುವದು ಶ್ಲಾಘನೀಯ ಎಂದರು.
ಸವಿತಾ ಲಕ್ಕುಂಡಿ ವಚನ ಪ್ರಾರ್ಥನೆಗೈದರು, ಕವಿತಾ ಬೇಲೇರಿ ಸ್ವಾಗತಿಸಿದರು. ರುಕ್ಮಿಣಿ ಕುರ್ತಕೋಟಿ ನಿರೂಪಿಸಿ ವಂದಿಸಿದರು. ಗೀತಾ ದೇವರಮನಿ, ಯಲ್ಲಮ್ಮ ಅರಕೇರಿ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಪದಾಧಿಕಾರಿ ಸುಜಾತಾ ಗುಡಿಮನಿ ಮಾತನಾಡಿ, ಸರ್ಕಾರಿ ಶಾಲೆಗೆ ಬರುವುದೆಂದರೆ ನಮಗೆಲ್ಲ ಖುಷಿ. ಇಲ್ಲಿಯ ಮಕ್ಕಳ ಮುಗ್ಧ ನಗು, ಅವರಲ್ಲಿರುವ ದಿಟ್ಟತನ, ಅವರ ಕಲಿಕೆಯ ಆಸಕ್ತಿ ಅವರನ್ನು ದೃಢಗೊಳಿಸುತ್ತವೆ ಎಂದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img