ಬೆಂಗಳೂರು: 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದ ರಾಜ್ಯ ಸರ್ಕಾರ, ಈಗ ನಿವೃತ್ತಿ ವೇತನ ಹೆಚ್ಚಳ ಮಾಡಿ ಪಿಂಚಣಿದಾರರಿಗೆ ಸಿಹಿ ಸುದ್ದಿ ಕೊಟ್ಟಿದೆ. ರಾಜ್ಯ ಸರ್ಕಾರದ ನಿವೃತ್ತ ನೌಕರರ ಪಿಂಚಣಿಯನ್ನು ಪರಿಷ್ಕರಣೆ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗವು ನೌಕರರ ವೇತವನ್ನು ಶೇ. 27.5ರಷ್ಟು ಹೆಚ್ಚಳ ಮಾಡಲು ಸರ್ಕಾರಕ್ಕೆ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ಆಯೋಗ 244 ಪುಟಗಳ ವರದಿಯನ್ನ ಶಿಫಾರಸು ಮಾಡಿತ್ತು.
ಕನಿಷ್ಠ ಪಿಂಚಣಿ ಜೊತೆಗೆ ರಾಜ್ಯ ಸರ್ಕಾರವು ಗರಿಷ್ಠ ಪಿಂಚಣಿಗೂ ಮಿತಿಯನ್ನ ನಿಗದಿಪಡಿಸಿದೆ. ಯಾವುದೇ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿಯು 1 ಲಕ್ಷದ 20 ಸಾವಿರದ 600 ರೂ.ಗಳಿಗೆ ಮೀರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಲ್ಲಿಯ ತನಕ ಗರಿಷ್ಠ ನಿವೃತ್ತಿ ವೇತನ 75,300 ರೂ.ಗಳಾಗಿತ್ತು. ಗರಿಷ್ಠ ಮಿತಿಯಲ್ಲಿ 45,300 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ.
ವಯೋನಿವೃತ್ತಿ ವೇತನ, ವಿಶ್ರಾಂತಿ ನಿವೃತ್ತಿ ವೇತನ, ಅಶಕ್ಷತಾ ನಿವೃತ್ತಿ ವೇತನ, ಪರಿಹಾರ ನಿವೃತ್ತಿ ವೇತನ ಹಾಗೂ ಅನುಕಂಪದ ಭತ್ಯೆಗಳನ್ನು ಪರಿಷ್ಕರಿಸಲಾಗಿದ್ದು, ಕನಿಷ್ಟ ಪಿಂಚಣಿಯನ್ನು ಮಾಸಿಕ 8,500 ರೂ.ಗಳಿಂದ 13,500 ರೂ.ಗಳಿಗೆ ಹಾಗೂ ಗರಿಷ್ಠ ಮಿತಿಯನ್ನು ಮಾಸಿಕ 75,300 ರೂ.ಗಳಿಂದ 1,20,600 ರೂ.ಗಳಿಗೆ ಹೆಚ್ಚಿಸಲಾಗಿದೆ. ಕುಟುಂಬ ನಿವೃತ್ತಿ ವೇತನವನ್ನು ಕನಿಷ್ಠ 13,500 ರೂ.ಗಳಿಗೆ ಹಾಗೂ ಗರಿಷ್ಠ 80,400 ರೂ.ಗಳಿಗೆ ಪರಿಷ್ಕರಿಸಲಾಗಿದ್ದು, ಆಗಸ್ಟ್ 1 ರಿಂದಲೇ ಈ ಪರಿಷ್ಕರಣೆಯ ಆರ್ಥಿಕ ಲಾಭ ಸಿಗಲಿದೆ.



