ಬೆಂಗಳೂರು: ಅಮ್ಮ ಬೈಕ್ ಕೊಡಿಸಲಿಲ್ಲ ಎಂದು ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಣ್ಣೂರಿನ ಥಣಿಸಂದ್ರದಲ್ಲಿ ನಡೆದಿದೆ. ಅಯ್ಯಪ್ಪ (20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಸೆಪ್ಟೆಂಬರ್ 11 ರಂದು ನಡೆದಿರುವ ಘಟನೆಯಾಗಿದೆ. ತಮಿಳುನಾಡು ಮೂಲದ ಅಯ್ಯಪ್ಪ ತನ್ನ ತಾಯಿ ಜತೆಗೆ ಬೆಂಗಳೂರಲ್ಲೇ ಬಂದು ನೆಲೆಸಿದ್ದ. ಥಣಿಸಂದ್ರದಲ್ಲಿ ಸಣ್ಣದೊಂದು ಮನೆ ಮಾಡಿಕೊಂಡು ವಾಸವಿದ್ದರು.
ಆರು ವರ್ಷಗಳ ಹಿಂದಷ್ಟೇ ಅಯ್ಯಪ್ಪ ತಂದೆ ತೀರಿ ಹೋಗಿದ್ದರು. ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಮಗನನ್ನು ಓದಿಸುತ್ತಿದ್ದರು. ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಯ್ಯಪ್ಪಗೆ ಇತ್ತೀಚಿಗೆ ಬೈಕ್ ಕ್ರೇಜ್ ಹೆಚ್ಚಾಗಿತ್ತು. ಬೈಕ್ ಕೊಡಿಸುವಂತೆ ಅಮ್ಮನ ಹಿಂದೆ ಬಿದ್ದಿದ್ದ, ಆದರೆ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೆಪ್ಟೆಂಬರ್ 11 ರ ಮಂಗಳವಾರ ಅಯ್ಯಪ್ಪ ತಾಯಿ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆಂದು ಹೋಗಿದ್ದರು. ಸಂಜೆ 4:30ರ ಸುಮಾರಿಗೆ ಮನೆಗೆ ವಾಪಸ್ ಆಗಿದ್ದ ಅವರಿಗೆ ಶಾಕ್ ಆಗಿದ್ದರು. ಇದರಿಂದ ಗಾಬರಿಗೊಂಡ ತಾಯಿ ಸಂಬಂಧಿಕರಿಗೆ ತಿಳಿಸಿದ್ದಾರೆ. ಸಂಬಂಧಿಕರು ಬಂದು ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹ ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.



