HomeGadag Newsಪ್ರೇರಣಾತ್ಮಕ ಕೆಲಸಗಳನ್ನು ಮಾಡೋಣ : ಜಗದೀಶ್ ಎಸ್.ಪಿ

ಪ್ರೇರಣಾತ್ಮಕ ಕೆಲಸಗಳನ್ನು ಮಾಡೋಣ : ಜಗದೀಶ್ ಎಸ್.ಪಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕೃತಪುರ ಸೇವಾ ಸಮಿತಿಯ ಸಂಘವನ್ನು ಸಾಮಾಜಿಕ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಸ್ಥಾಪನೆ ಮಾಡಲಾಗಿದೆ. ಕಳೆದ 2 ವರ್ಷದಿಂದ ಮದ್ಯರಾತ್ರಿ 12ಕ್ಕೆ ಸ್ವಾತಂತ್ರ ದಿನಾಚರಣೆ ಅಂಗವಾಗಿ ದ್ವಜಾರೋಹಣ ಮಾಡುತ್ತಾ ಬಂದಿದ್ದೇವೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಸಸಿ ವಿತರಿಸಿದ್ದೇವೆ. ಈ ಬಾರಿ ಗಣೇಶ ವಿಸರ್ಜನೆ ವೇಳೆಯೂ ಸಾರ್ವಜನಿಕರಿಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಸಸಿ ವಿತರಿಸಲು ತಿರ್ಮಾನಿಸಿದ್ದೇವೆ. ಅರಣ್ಯ ಇಲಾಖೆ ಸಹಕಾರದಿಂದ ಈ ಕಾರ್ಯ ಮಾಡುತ್ತಿದ್ದೇವೆ ಎಂದು ಕೃತಪುರ ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಎಸ್.ಪಿ. ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣೇಶೋತ್ಸವ ವಿಸರ್ಜನೆ ವೇಳೆ ಬಹುತೇಕ ಡಿಜೆ ಸದ್ದು ಎಲ್ಲ ಕಡೆ ಕೇಳುತ್ತದೆ. ಆದರೆ, ಇದರಿಂದ ಯುವಕರು ದಾರಿ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ, ವಯಸ್ಸಾದವರಿಗೂ ತೊಂದರೆ ಉಂಟಾಗುತ್ತದೆ. ಡಿಜೆ ಬದಲಾಗಿ ಜಾನಪದ ಕಲೆಗಳಿಗೆ ಒತ್ತು ನೀಡಿದರೆ ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಕೃತಪುರ ಸೇವಾ ಸಮಿತಿಯಿಂದ ವಿಭಿನ್ನ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ನಮ್ಮ ಸಮಿತಿಯ ಸದಸ್ಯರು ವಿಭಿನ್ನ ಕಾರ್ಯಕ್ರಮದ ಬಗ್ಗೆ ಯಾವಾಗಲೂ ಪ್ರಸ್ತಾಪ ಮಾಡುತ್ತಾರೆ. ಅದರಂತೆ ನಾವು ಸಸಿ ನೆಡುವ ಕಾರ್ಯಕ್ರಮದ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಜೊತೆಗೆ, ಸಾರ್ವಜನಿಕರು ನಮ್ಮ ಜೊತೆ ಕೈ ಜೊಡಿಸಲೆಂದು ಡಿಜೆ ಬದಲಾಗಿ ಅದೇ ಹಣದಿಂದ ಉಚಿತ ಸಸಿ ವಿತರಣೆ ಮಾಡಲು ಸಮಿತಿಯ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ನಮ್ಮ ಸಮಿತಿಯ ಪದಾಧಿಕಾರಿಗಳು ಇದೂವರೆಗೂ ಹಲವಾರು ಸಾಮಾಜಿಕ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ಆದರೆ, ಇದೂವರೆಗೆ ಪ್ರಚಾರಕ್ಕಾಗಿ ಮಾಡಿಲ್ಲ. ಕೇವಲ ಮಾನವ ಕುಲದ ಒಳಿತಿಗಾಗಿ ಸಸಿ ವಿತರಣೆ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಯೋಜಿಸಲು ತಿರ್ಮಾನಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಮಂತ್ ಹಾರೋಗೇರಿ, ಶ್ರೀಧರ್ ಬಗಾಡೆ, ಕಾರ್ತಿಕ್ ಹಿರೇಮಠ, ಶಶಿ ಡಿಗ್ಗಾವಿ, ರವಿ ಘೋಡಕೆ, ಸಚಿನ್ ಮುಂಡವಾಡ, ಮನೋಜಕುಮಾರ ಆಲೂರ, ಪುಟ್ಟರಾಜ ವೀರಶೆಟ್ಟರ್, ಸಿದ್ದಪ್ಪ ಚಿಣ್ಣಣ್ಣನವರ ಮುಂತಾದವರು ಉಪಸ್ಥಿತರಿದ್ದರು.

ಕೊಪ್ಪಳ ಜಿಲ್ಲೆಯ ಕಿನ್ನಾಳ ತಾಲೂಕಿನ ಯುವಕರು ಡಿಜೆಗೆ ಬಳಸುತ್ತಿದ್ದ ಹಣವನ್ನು ಹಳ್ಳಿಗಳ ರಸ್ತೆಯ ರಿಪೇರಿಗೆ ಬಳಸಿ ಮಾದರಿಯಾಗಿದ್ದಾರೆ. ಅವರ ಈ ಕಾರ್ಯಕ್ರಮವನ್ನು ನೋಡಿ ನಾವು ಸ್ಪೂರ್ತಿ ಹೊಂದಿ ಮಾನವನಿಗೆ ಅತ್ಯವಶ್ಯಕವಾಗಿರುವ ಗಾಳಿಯನ್ನು ನೀಡುವ ಸಸಿಗಳನ್ನು ವಿತರಿಸುವ ಮೂಲಕ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಕೈ ಹಾಕಿದ್ದೇವೆ. ನಾವು ಮತ್ತೊಬ್ಬರ ಕಾರ್ಯಕ್ರಮಗಳಿಗೆ ಮಾದರಿಯಾಗಿ ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿದ್ದು, ನಮ್ಮ ಕಾರ್ಯಕ್ರಮಗಳಿಂದ ಮತ್ತೊಬ್ಬರು ಪ್ರೇರಣೆಯಾಗಿ ಇಂತಹ ಕಾರ್ಯ ಮಾಡಲಿ ಎಂದು ಆಶಿಸುತ್ತೇವೆ ಎಂದು ಜಗದೀಶ್ ಎಸ್.ಪಿ ಹೇಳಿದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img