ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆಯರು ಹೈನುಗಾರಿಕೆಯನ್ನು ಉದ್ಯೋಗವನ್ನಾಗಿ ಮಾಡಿಕೊಂಡು ಆ ಮೂಲಕ ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದಾಗಿದೆ ಎಂದು ಗದುಗಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ರಾಮಚಂದ್ರ ಬಿ ಅಭಿಪ್ರಾಯಪಟ್ಟರು.
ಗದುಗಿನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ, ಗದಗ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಔಟ್ರಿಚ್ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಔಟ್ರಿಚ್ ಸಂಸ್ಥೆಯ ವಿಸ್ತರಣಾ ಕಾರ್ಯಕರ್ತರಿಗೆ ‘ವೈಜ್ಞಾನಿಕ ಹೈನುಗಾರಿಕೆ’ 2 ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ, ಕೃಷಿ ಅಧಾರಿತ ಉಪಕಸಬುಗಳು ಕೈಗೊಳ್ಳುವುದರೊಂದಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರ ಮಹಿಳಾ ಅಭಿವೃದ್ಧಿಗಾಗಿ ಹತ್ತು ಹಲವೆಂಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಆಧುನಿಕತೆಯ ಇಂದಿನ ದಿನಗಳಲ್ಲಿ ಹೈನುಗಾರಿಕೆಗೆ ಉತ್ತಮ ಅವಕಾಶಗಳಿವೆ ಸ್ವಲ್ಪು ಕಷ್ಟಪಟ್ಟರೆ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದರು.
ಡಾ.ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ ಅವರು ಆಕಳು ಮತ್ತು ಎಮ್ಮೆ ತಳಿಯ ಮಹತ್ವ, ಡಾ.ಮೋಹನ ಪಿ ‘ಪಶು ಕೃತಕ ಗರ್ಭಧಾರಣೆ, ಡಾ.ಶಿವಾನಂದ ಗೌಡರ ‘ಮೇವು ಉತ್ಪಾದನೆ ಮತ್ತು ನಿರ್ವಹಣೆ, ಡಾ.ಅರುಣ ಸೋಮಗಂಧ ‘ಆಕಳು ಮತ್ತು ಎಮ್ಮೆಗಳ ರೋಗಗಳು ಹಾಗೂ ಹತೋಟಿ, ಡಾ.ಜಗನ್ನಾಥರಾವ್ ‘ಹಾಲು ಮತ್ತು ಹಾಲು ಉತ್ಪನ್ನಗಳು’ ವಿಷಯವಾಗಿ ಪರಿಣಾಮಕಾರಿ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಔಟ್ರಿಚ್ ಸಂಸ್ಥೆಯ ಹಿರಿಯ ಕಾರ್ಯಕ್ರಮ ಸಂಯೋಜಕ ಗೋವಿಂದಯ್ಯ ಬಿ, ಕಾರ್ಯಕ್ರಮ ಸಂಯೋಜಕ ಲೋಹಿತ್ ಕಾಸರ ಮತ್ತು ರಿಲಾಯನ್ಸ್ ಪೌಂಡೇಶನ್ನ ಜೀರೋಂಪಿಯೋ ಉಪಸ್ಥಿತರಿದ್ದರು.
ಎರಡು ದಿನಗಳವರೆಗೆ ನಡೆದ ತರಬೇತಿ ಶಿಬಿರದಲ್ಲಿ ಔಟ್ರಿಚ್ ಸಂಸ್ಥೆಯ ವಿಸ್ತರಣಾ ಮಹಿಳಾ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೋಂಡು ಹಲವಾರು ವಿಷಯಗಳನ್ನು ತಿಳಿದುಕೊಂಡರು ಹಾಗೂ ತಜ್ಞರೊಂದಿಗೆ ಸಂವಾದ ನಡೆಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು.



