HomeGadag Newsತೆರಿಗೆ ವಸೂಲಿ ಅಭಿಯಾನದಲ್ಲಿ ರೋಣ ತಾ.ಪಂ ದಾಖಲೆ

ತೆರಿಗೆ ವಸೂಲಿ ಅಭಿಯಾನದಲ್ಲಿ ರೋಣ ತಾ.ಪಂ ದಾಖಲೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನಾದ್ಯಂತ ಡಿ.1ರಿಂದ ಡಿ.30ರವರಗೆ ಕರ ವಸೂಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕೇವಲ 15ದಿನಗಳಲ್ಲಿ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 35,28,492ಕ್ಕೂ ಅಧಿಕ ತೆರಿಗೆ ಸಂಗ್ರಹಣೆಯೊಂದಿಗೆ ರೋಣ ತಾ.ಪಂ ತೆರಿಗೆ ವಸೂಲಿ ಅಭಿಯಾನದಲ್ಲಿ ಮಹತ್ವದ ಹೆಜ್ಜೆ ಇಟ್ಟು ಅಧಿಕಾರಿ ವರ್ಗಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.

ರೋಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ತಾಲೂಕಿನಲ್ಲಿ ತೆರಿಗೆ ವಸೂಲಿ ಪ್ರಮಾಣ ಕಡಿಮೆ ಇರುವದನ್ನು ಗುರುತಿಸಿ ಎಲ್ಲಾ ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕರ ವಸೂಲಿಕಾರರಿಗೆ ತಾಲೂಕಿನಲ್ಲಿ ಒಂದು ತಿಂಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದರು. 22 ಗ್ರಾ.ಪಂಗಳಲ್ಲಿ 15 ದಿನದಲ್ಲಿ ಹೆಚ್ಚು ತೆರಿಗೆ ವಸೂಲಿ ಮಾಡಿದ 5 ಜನ ಕರ ವಸೂಲಿಗಾರರಿಗೆ, 1 ಲಕ್ಷಕ್ಕೂ ಹೆಚ್ಚು ಪ್ರಗತಿ ಸಾಧಿಸಿದ ಕರ ವಸೂಲಿಕಗಾರರಿಗೆ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ನಡೆಸಿದ ವಿಶೇಷ ಅಭಿಯಾನದಲ್ಲಿ ಹೆಚ್ಚು ಪ್ರಗತಿ ಸಾಧಿಸಿದ 5 ಜನ ಕರ ವಸೂಲಿಕಗಾರರಿಗೆ ತಾ.ಪಂ ಸಭಾಂಗಣದಲ್ಲಿ ಸನ್ಮಾನದ ಜೊತೆಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು. ಈ ಅಭಿಯಾನದಲ್ಲಿ ಮೆಣಸಗಿ, ಹೊಸಳ್ಳಿ, ಮಲ್ಲಾಪೂರ, ಕುರಹಟ್ಟಿ ಗ್ರಾ.ಪಂಗಳು ಶೇ.೧೦೦ರಷ್ಟು ಪ್ರಗತಿ ಸಾಧಿಸಿ ವಿಶೇಷ ಗಮನ ಸೆಳೆದಿವೆ.

ಒಂದು ತಿಂಗಳು ಕಾಲ ತಾಲೂಕಿನಲ್ಲಿ ವಿಶೇಷ ಕರ ವಸೂಲಿ ಅಭಿಯಾನದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಿಡಿಒ, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿಇಒ, ವಾಟರ್ ಮ್ಯಾನ್‌ಗಳು, ಜಿಕೆಎಂ, ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಂಡು ತೆರಿಗೆ ಸಂಗ್ರಹಣೆ ಮಾಡಲಾಯಿತು.

ತಾ.ಪಂ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ (ಪಂ.ರಾ) ರೀಯಾಜ್ ಖತೀಬ್, ತಾ.ಪಂ ವ್ಯವಸ್ಥಾಪಕರಾದ ದೇವರಾಜ್ ಸಜ್ಜನಶೆಟ್ಟರ, ಸಹಾಯಕ ಲೆಕ್ಕಾಧಿಕಾರಿ ಅನಿಲಕುಮಾರ ಬೇವಿನಮರದ ಸೇರಿದಂತೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿಇಓ, ತಾ.ಪಂ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು ಹಾಜರಿದ್ದರು.

ಅಭಿಯಾನದ ವಿಶೇಷತೆ

22 ಗ್ರಾ.ಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಠ ೨೦೦ ಆಸ್ತಿ ಮಾಲೀಕರನ್ನು ಗುರುತಿಸಿ ಅವರಿಗೆ ನೋಟೀಸ್ ನೀಡಿ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳಿಗೆ ನೋಟೀಸ್ ಜಾರಿ ಮಾಡಿ ಸಂಪೂರ್ಣ ಮೊತ್ತ ಪಾವತಿಸಿಕೊಳ್ಳುವುದು, ತೆರಿಗೆ ಪಾವತಿ ಬಾಕಿ ಹೊಂದಿರುವ ಅಂಗಡಿ ಮಾಲೀಕರು, ಉದ್ದಿಮೆದಾರರು, ಸರ್ಕಾರಿ ನೌಕರರರಿಗೆ ನೋಟೀಸ್ ನೀಡಿ ಬಾಕಿ ವಸೂಲಿ ಮಾಡಲು ಸೂಚಿಸಲಾಗಿತ್ತು. ಅದರಂತೆ ಕೇವಲ ೧೫ ದಿನದಲ್ಲಿ ದಾಖಲೆಯ ಕರ ವಸೂಲಿ ಮಾಡಲಾಗಿದೆ.

15 ದಿನದ ತೆರಿಗೆ ಸಂಗ್ರಹಣೆ ವಿವರ

ಹೊಳೆಆಲೂರ-696188 ರೂ, ಕುರಹಟ್ಟಿ-273356 ರೂ, ಕೊತಬಾಳ-246878 ರೂ, ಮೆಣಸಗಿ-196622  ರೂ, ಮಲ್ಲಾಪೂರ-185104 ರೂ, ಹಿರೇಹಾಳ-177511 ರೂ, ಅಸೂಟಿ-167253 ರೂ, ಜಕ್ಕಲಿ-163627 ರೂ, ಚಿಕ್ಕಮಣ್ಣೂರ-144644 ರೂ, ಹೊಳೆಮಣ್ಣೂರ-143480 ರೂ, ಅಬ್ಬಿಗೇರಿ- 137240 ರೂ, ಹುಲ್ಲೂರ-129320  ರೂ, ಕುರಡಗಿ-125768 ರೂ, ಬೆಳವಣಕಿ-125558 ರೂ, ಯಾವಗಲ್-125558 ರೂ, ಹುನಗುಂಡಿ-110674 ರೂ, ಸವಡಿ-100316 ರೂ, ಡ.ಸ.ಹಡಗಲಿ – 70877 ರೂ, ಅಮರಗೋಳ-70737 ರೂ, ಹೊಸಳ್ಳಿ–53841 ರೂ, ಕೌಜಗೇರಿ-51234 ರೂ, ಮಾಡಲಗೇರಿ-33405 ರೂ ಹೀಗೆ ಒಟ್ಟು35,28,492 ರೂ ಕರ ಸಂಗ್ರಹಿಸಲಾಗಿದೆ.

 

ಕಾರ್ಯ ನಿರ್ವಾಹಕ ಅಧಿಕಾರಿಗಳು ಒಂದು ತಿಂಗಳ ಕಾಲ ಕರ ವಸೂಲಿ ಅಭಿಯಾನ ಹಮ್ಮಿಕೊಳ್ಳಲು ಸೂಚನೆ ನೀಡಿದ್ದರು. ಅದರಂತೆ ಗ್ರಾಮದ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿ ತೆರಿಗೆ ವಸೂಲಿ ಮಾಡಲು ಕರ ವಸೂಲಿಕಾರರ ಜೊತೆಗೂಡಿ ನಾವು ಕೆಲಸ ಮಾಡಿದ್ದೇವೆ. ಕರ ವಸೂಲಿಕಾರರು ಉತ್ತಮ ಕೆಲಸ ಮಾಡಿದ ಕಾರಣ ನಮ್ಮ ಗ್ರಾಮ ಪಂಚಾಯಿತಿ ಮೊದಲ ಸ್ಥಾನ ಪಡೆದಿದ್ದು ಖುಷಿಯ ವಿಚಾರ.

– ಬಸವರಾಜ ಗಿರಿತಮ್ಮನ್ನವರ.

ಪಂಚಾಯತ ಅಭಿವೃದ್ಧಿ ಅಧಿಕಾರಿ, ಹೊಳೆ ಆಲೂರ.

ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಲಹೆ ಸೂಚನೆ ಮೇರೆಗೆ ಗ್ರಾ.ಪಂನಲ್ಲಿ ತೆರಿಗೆ ವಸೂಲಿ ಮಾಡಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಿಬ್ಬಂದಿಗಳ ಜೊತೆಗೆ ಚರ್ಚಿಸಿ ತಿಂಗಳ ಕಾಲ ಅಭಿಯಾನ ಹಮ್ಮಿಕೊಂಡಿದ್ದೇವೆ. ಆದರೆ 15 ದಿನದಲ್ಲಿ ಇಷ್ಟು ತೆರಗೆ ಸಂಗ್ರಹವಾಗಿದ್ದು ಉತ್ತಮ ಬೆಳವಣಿಗೆ. ಮುಂದಿನ 15 ದಿನಗಳಲ್ಲಿ ಇನ್ನೂ ಹೆಚ್ಚಿನ ತೆರಿಗೆ ವಸೂಲಿ ಮಾಡಲು ಸೂಚನೆ ನೀಡಿದ್ದೇವೆ.

– ಚಂದ್ರಶೇಖರ ಬಿ.ಕಂದಕೂರ.

 ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾ.ಪಂ ರೋಣ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!