HomeGadag Newsಎಳ್ಳ ಅಮವಾಸ್ಯೆ ಹಬ್ಬಕ್ಕೆ ಫೆಂಗಲ್ ಚಂಡಮಾರುತದ ಎಫೆಕ್ಟ್ : ಸಂಪ್ರದಾಯ ಬಿಡದ ರೈತ ಸಮುದಾಯ

ಎಳ್ಳ ಅಮವಾಸ್ಯೆ ಹಬ್ಬಕ್ಕೆ ಫೆಂಗಲ್ ಚಂಡಮಾರುತದ ಎಫೆಕ್ಟ್ : ಸಂಪ್ರದಾಯ ಬಿಡದ ರೈತ ಸಮುದಾಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮುಂಗಾರಿನಲ್ಲಿನ ಅಸಮರ್ಪಕ ಮಳೆಯಿಂದ ನಷ್ಟ ಅನುಭವಿಸಿದ ರೈತ ಸಮುದಾಯ ಹಿಂಗಾರಿನ ಪ್ರಾರಂಭದಲ್ಲಿ ಬಿತ್ತನೆಗೆ ಬಿಡುವು ಕೊಡದ ಮಳೆಯಿಂದ ಬಿತ್ತನೆಗೆ ಹಿನ್ನಡೆ, ಬಿತ್ತನೆಯಾದ ಬೆಳೆಗೆ ಹವಾಮಾನ ವೈಪರಿತ್ಯ, ಚಂಡಮಾರುತ, ಅಕಾಲಿಕ ಮಳೆ, ರೋಬಾಧೆಯಿಂದ ಜರ್ಝರಿತಗೊಂಡಿರುವ ರೈತ ಸಮುದಾಯ ಸೋಮವಾರ ಲಕ್ಮೇಶ್ವರ ಸೇರಿ ತಾಲೂಕಿನ ಅಲ್ಲಲ್ಲಿ ಎಳ್ಳಾಮವಾಸ್ಯೆಯನ್ನು ಸಂಕ್ಷಿಪ್ತ ಮತ್ತು ಸಾಂಪ್ರದಾಯಿಕವಾಗಿ ಆಚರಿಸಿದರು.

ಉತ್ತರ ಕರ್ನಾಟಕದ ರೈತರು ಮುಂಗಾರಿನಲ್ಲಿ ಸೀಗೆ ಹುಣ್ಣಿಮೆ ಆಚರಿಸುವ ರೀತಿಯಲ್ಲಿ ಹಿಂಗಾರಿನ ಸಂಕ್ರಮಣ ಕಾಲದಲ್ಲಿ ಎಳ್ಳಾಮಾವಾಸ್ಯೆ ಆಚರಿಸುತ್ತಾರೆ. ಹಿಂಗಾರಿನಲ್ಲಿನ ಬೆಳೆಗಳು ತೆನೆ, ಕಾಯಿ ಕಟ್ಟಿ ಫಲ ಕೊಡುವ ಹಂತದಲ್ಲಿ ಭೂತಾಯಿಗೆ ಉಡಿ ತುಂಬಿ, ಧನ್ಯತೆಯ ಭಾವದೊಂದಿಗೆ ಪೂಜೆ ಸಲ್ಲಿಸುವ ಸಂಭ್ರಮದ ಹಬ್ಬ ಇದಾಗಿದೆ.

ಹಿಂಗಾರಿ ಬೆಳೆಗಳಾದ ಜೋಳ, ಕಡಲೆ, ಗೋದಿ, ಕುಸಬಿ ಬೆಳದ ಜಮೀನುಗಳಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್, ಬೈಕ್, ಕಾರುಗಳಲ್ಲಿ ಹೋಗಿ ಭೂತಾಯಿಗೆ ಉಡಿ ತುಂಬಿ, ಪೂಜೆ ಮಾಡಿ, ಚರಗ ಚೆಲ್ಲುವ ಸಂಪ್ರದಾಯ ನೆರವೇರಿಸಲಾಗುತ್ತದೆ. ಬಳಿಕ ಹಬ್ಬಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಎಣಗಾಯಿ ಪಲ್ಲೆ, ಹೆಸರಕಾಳುಪಲ್ಲೆ, ಮಿಜ್ಜಿಹಿಂಡಿ, ಎಳ್ಳ ಹೋಳಿಗೆ, ಶೇಂಗಾ ಹೋಳಿಗೆ, ಕಡುಬು, ಕಿಚಡಿ ಹುಗ್ಗಿಯ ರುಚಿಯನ್ನು ಮನೆ ಮಂದಿ, ಬಂಧುಗಳು, ನೆರೆಹೊರಯವರೆಲ್ಲ ಸೇರಿ ಸವಿಭೋಜನ ಸವಿಯುತ್ತಾರೆ.

ಈ ನಡುವೆ ಬಂದ ಎಳ್ಳಮಾವಾಸ್ಯೆ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಉತ್ಸಾಹ, ಹುಮ್ಮಸ್ಸಿಲ್ಲದೇ ರೈತರು ಬೆಳಿಗ್ಗೆ ಜಮೀನಿಗೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದು ಸಾಮಾನ್ಯವಾಗಿತ್ತು. ಈ ನಡುವೆ ಒಂದಿಷ್ಟು ರೈತರು ಸಾಂಪ್ರದಾಯಿಕ ಹಬ್ಬದೂಟದೊಂದಿಗೆ ಹೊಲಕ್ಕೆ ತೆರಳಿ, ಮುತೈದೆಯರಿಗೆ ಉಡಿ ತುಂಬಿ ಸಹಭೋಜನ ಸವಿದು ಹಬ್ಬ ಆಚರಿಸಿದ್ದು ಕಂಡುಬಂದಿತು.

ತಡವಾದ ಬಿತ್ತನೆಯ ನಡುವೆಯೂ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆಯಿಂದ ಬರಸಿಡಿಲು ಬಡಿದಂತಾಗಿದೆ. ಕಳೆದ 8-10 ದಿನಗಳ ಹಿಂದಷ್ಟೇ ತಾಲೂಕಿನಾದ್ಯಂತ ಏಕಾಏಕಿ ಸುರಿದ ಅಕಾಲಿಕ ಮಳೆ, ಸೈಕ್ಲೋನ್ ಪರಿಣಾಮ ಕಾಳುಕಟ್ಟಿದ ಜೋಳದ ತೆನೆ ಕಪ್ಪಾಗಿದೆ. ಹೂ-ಕಾಯಿ ಭರಿತ ನೆಚ್ಚಿನ ಬೆಳೆ ಕಡಲೆಗೆ ಸೊರಗು ರೋಗ ಆವರಿಸಿದೆ. ಕುಸುಬಿ, ಗೋದಿ ಅಷ್ಟಕ್ಕಷ್ಟೇ ಎಂಬಂತಾಗಿದೆ. ವರ್ಷಪೂರ್ತಿ ಆಹಾರ ಧಾನ್ಯ ಮತ್ತು ಜಾನುವಾರುಗಳ ಮೇವಿನ ಕೊರತೆಯಿಂದ ಜೀವನ ನಡೆಸುವುದೇ ಕಷ್ಟವಾಗಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

 

ಮುಂಗಾರಿನಲ್ಲಿ ಮಳೆ ಕೊರತೆಯಿಂದ ಹೆಸರು, ಶೇಂಗಾ ಬೆಳೆ ಇಳುವರಿ ಕುಂಠಿತವಾಗಿ ನಷ್ಟ ಅನುಭವಿಸಿದ್ದೇವೆ. ಹಿಂಗಾರಿನ ಬೆಳೆಗಳು ಹುಲುಸಾಗಿ ಬೆಳೆದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೆವು. ಇತ್ತೀಚಿನ ಚಂಡಮಾರುತದಿಂದಾದ ಮೋಡದ ಹವಾಮಾನ ಮತ್ತು ಅಕಾಲಿಕ ಮಳೆಯಿಂದ ಬೆಳೆಗಳಿಗೆ ರೋಗಬಾಧೆ ಆವರಿಸಿ ನಿರೀಕ್ಷೆ ಹುಸಿಯಾಗಿದೆ. ಈ ನಡುವೆ ಸಂಪ್ರದಾಯ ಬಿಡಲಾಗದೇ ಎಳ್ಳ ಅಮವಾಸ್ಯೆಯಂದು ಹೊಲಕ್ಕೆ ಹೋಗಿ ಪೂಜೆ ಸಲ್ಲಿಸಿ ನಮ್ಮನ್ನು ಕಾಪಾಡು ತಾಯಿ ಎಂದು ಭೂತಾಯಿಗೆ ಬೇಡಿಕೊಳ್ಳುತ್ತಿದ್ದೇವೆ.

– ತಿಪ್ಪಣ್ಣ ಗೊಜನೂರ.

ರೈತರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!