ವಿಜಯಸಾಕ್ಷಿ ಸುದ್ದಿ, ಗದಗ: ಹಾವೇರಿ ಜಿಲ್ಲೆಯ ಚೌಡದಾನಪೂರ ಹತ್ತಿರವಿರುವ ನರಸಿಪೂರದಲ್ಲಿ ಅಂಬಿಗರ ಚೌಡಯ್ಯ ಗುರುಪೀಠ ವತಿಯಿಂದ 7ನೇ ಅಂಬಿಗರ ಶರಣ ಸಂಸ್ಕೃತಿ ಉತ್ಸವ ಜರುಗುವುದು ಎಂದು ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೋಶಗಳ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಬಿ.ಎನ್. ಯರನಾಳ ಹೇಳಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಗದಗ ಜಿಲ್ಲಾ ನಿಜಶರಣ ಅಂಬಿಗರ ಸಮಾಜದ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಮಾತನಾಡಿ, ಜನವರಿ 14 ಹಾಗೂ 15ರಂದು ನಡೆಯುವ ಕಾರ್ಯಕ್ರಮಕ್ಕೆ ಗಣ್ಯ ಮಹನೀಯರು, ಸಚಿವರು, ಶಾಸಕರು ಭಾಗವಹಿಸುವರು. ಆದ ಕಾರಣ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸೋಣ. ಪಾಶ್ಚಿಮಾತ್ಯ ಸಂಸ್ಕೃತಿ ಬಿಟ್ಟು ನಾಡಿನ ಶರಣರ ಸಂಸ್ಕೃತಿಗೆ ಯುವಕರು ಅಂಟಿಕೊಳ್ಳಿರಿ ಎಂದರು.
ನೂತನವಾಗಿ ಗುರುಪೀಠಕ್ಕೆ ಗದಗ ಜಿಲ್ಲೆಯಿಂದ ನಿರ್ದೆಶಕರಾಗಿ ಆಯ್ಕೆಯಾದ ಕಾಶಪ್ಪ ಬಳಗಾನೂರ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಅಧ್ಯಕ್ಷ ರಾಮಣ್ಣ ಇರಕಲ್ಲ, ಕೆಪಿಸಿಸಿ ಮೀನುಗಾರರ ವಿಭಾಗದ ಜಿಲ್ಲಾಧ್ಯಕ್ಷ ಗುರುಪ್ಪ ತಿರ್ಲಾಪೂರ, ಸಮಾಜದ ಉಪಾಧ್ಯಕ್ಷ ಪ್ರವೀಣ ನೀಲಣ್ಣವರ, ಅಮಿತ ಪೂಜಾರ, ರವಿಕುಮಾರ ಗುಡಿಸಾಗರ, ಹರೀಶ ಪೂಜಾರ, ಚಂದ್ರಶೇಖರ ಅಂಬಿಗೇರ, ಶಿವಾನಂದ ಬನಹಟ್ಟಿ ಉಪಸ್ಥಿತರಿದ್ದರು.



