ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮನುಷ್ಯ ಜೀವನದಲ್ಲಿ ನೆಮ್ಮದಿ ಪಡೆಯಬೇಕಾದರೆ ಅವನಲ್ಲಿ ಸಂಸ್ಕಾರ, ಸಂಸ್ಕೃತಿಗಳು ಮುಖ್ಯವಾಗಿವೆ. ಇವುಗಳನ್ನು ಅಳವಡಿಸಿಕೊಂಡವರು ಪರಿಪೂರ್ಣ ವ್ಯಕ್ತಿಯಾಗುತ್ತಾರೆ. ಈ ಸಂಸ್ಕಾರ-ಸಂಸ್ಕೃತಿಗಳು ಇಂತಹ ಜಾತ್ರಾ ಮಹೋತ್ಸವದ ಧರ್ಮ ಸಭೆಯಲ್ಲಿ ದೊರಕುತ್ತವೆ. ಇದರಲ್ಲಿ ಭಾಗಿಯಾಗಿ ಎಲ್ಲ ಪೂಜ್ಯರ ಆಶೀರ್ವಚನ ಕೇಳಿ ಪುನೀತರಾಗಿದ್ದೀರಿ. ಸಂಸ್ಕಾರ-ಸಂಸ್ಕೃತಿಗಳು ಮನುಷ್ಯನ ಎರಡು ಕಣ್ಣುಗಳಾಗಿವೆ ಎಂದು ಹಾಲಕೆರೆ ಶ್ರೀಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಹಾಲಕೆರೆ ಸಂಸ್ಥಾನ ಮಠದ 174ನೇ ಜಾತ್ರಾಮಹೋತ್ಸವದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಹಿಂದಿನ ಪೀಠಾಧಿಪತಿಗಳೆಲ್ಲರೂ ಶ್ರೀಮಠದ ಉದ್ಧಾರವನ್ನಷ್ಟೇ ಮಾಡದೆ, ಈ ಭಾಗದ ಜನರಿಗೆ ಶಿಕ್ಷಣ ದಾಸೋಹವನ್ನು ಅನ್ನದಾನದೊಂದಿಗೆ ನೀಡಿದ ಮಹಾತ್ಮರು. ಬೆತ್ತದ ಅಜ್ಜನವರು ಮಾಡಿದ ಪವಾಡಗಳನ್ನು ತಿಳಿಯಲು ಬಹಳಷ್ಟು ಸಮಯ ಬೇಕು. ಅವರ ಶೈಕ್ಷಣಿಕ ಕ್ರಾಂತಿ ಎಲ್ಲರಲ್ಲಿಯೂ ಅಕ್ಷರದ ಬೆಳಕನ್ನು ಮೂಡಿಸಿದೆ. ಮೌನಾಚರಣೆಯ ಮೂಲಕ ಅಜ್ಜನವರನ್ನು ಸ್ಮರಿಸಿದರೆ ನಿಮ್ಮ ಅಗತ್ಯಗಳು ಈಡೇರುತ್ತವೆ. ಮನಸ್ಸು ಮಾಡಿದರೆ ಅದೇ ಒಂದು ತಪಸ್ಸಾಗುತ್ತದೆ. ದೇವರು ಮನುಷ್ಯನಿಗೆ ಎಲ್ಲವನ್ನೂ ತಿಳಿದುಕೊಳ್ಳುವ, ಮನಸ್ಸನ್ನು ನಿಗ್ರಹಿಸಿಕೊಳ್ಳುವ ಶಕ್ತಿಯನ್ನು ನೀಡಿದ್ದಾನೆ. ಈ ನಿಗ್ರಹ ಶಕ್ತಿಯನ್ನು ನೀವು ಸದುಪಯೋಗಪಡಿಸಿಕೊಂಡು, ಅನ್ನದಾನೇಶ ಎಲ್ಲವೂ ನೀನೇ ಎಂದು ಸ್ಮರಿಸಿದರೆ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎಂದು ನುಡಿದರು.
ವೇದಿಕೆಯ ಮೇಲೆ ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳು, ಮುಖಂಡರಾದ ಮಿಥುನ ಜಿ. ಪಾಟೀಲ, ಸಿದ್ದಣ್ಣ ಬಂಡಿ, ಡಾ. ಬಿ.ವಿ. ಶಿರೂರ ಮತ್ತಿತರರು ಇದ್ದರು. ಲೇಖಕ ಗಿರಿರಾಜ ಹೊಸಮನಿ ಬರೆದ `ಹಾಲಕೆರೆಯ ಐಸಿರಿ’ ಗ್ರಂಥವೂ ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ನಿರ್ವಹಿಸಿದರು.
ಈ ಭಾಗದಲ್ಲಿ ನೆಲೆಸಿರುವ ಶ್ರೀ ಅನ್ನದಾನೇಶ್ವರ ಮಠವು ಮೂಲತಃ ಅಲ್ಲಮಪ್ರಭುವಿನ ಪ್ರೇರಣೆಯಿಂದ ರಚನೆಗೊಂಡಿದೆ. ಇಲ್ಲಿನ ಪೀಠಾಧಿಪತಿಗಳು ಎಂದಿಗೂ ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವವನ್ನೇ ತೇಯ್ದಿದ್ದಾರೆ. ಜೀವನದಲ್ಲಿ ಇನ್ನಿಲ್ಲದ ಆಸೆಗಳನ್ನು ಪಡುವುದರ ಬದಲಾಗಿ ಇದ್ದುದರಲ್ಲಿಯೆ ಸಮಾಧಾನ ಪಡೆಯಲು ಪ್ರಯತ್ನಿಸಬೇಕು. ಇದು ತುಂಬಾ ಕಷ್ಟಕರ ಕೆಲಸವಾದರೂ ಸಾಧನೆ ಮಾಡಿದರೆ ಸಿದ್ಧಿಸುತ್ತದೆ. ಸುಮ್ಮನಿರುವುದು ಜಗತ್ತಿನ ಏನೆಲ್ಲವನ್ನೂ ಗೆದ್ದಂತೆ ಎಂದು ಶ್ರೀಗಳು ಹೇಳಿದರು.



