ವಿಜಯಸಾಕ್ಷಿ ಸುದ್ದಿ, ಮಳಖೇಡ: ನೀತಿ-ನಿಯತ್ತುಗಳು ಮಾನವೀಯ ಸಂಬಂಧಗಳನ್ನು ಜೋಡಿಸುತ್ತವೆ. ವಿದ್ಯೆ ವಿನಯಕ್ಕೆ ಕಾರಣವಾಗಬೇಕಲ್ಲದೇ ದುರಹಂಕಾರಕ್ಕಲ್ಲ. ಒಳ್ಳೆಯ ಮಾತಿಗೆ ಬದುಕನ್ನು ಪರಿವರ್ತಿಸುವ ಶಕ್ತಿಯಿದೆ. ಮಹಾತ್ಮರ ನುಡಿಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಸ್ಥಳೀಯ ಮೂಲಾಧಾರ ಸಂಸ್ಥಾನ ಬೃಹನ್ಮಠದ 24ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಗುರುಭವನ-ಮಹಾದ್ವಾರ ಉದ್ಘಾಟನೆಯ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನ ಉತ್ಸಾಹದಿಂದ ಕೂಡಿರಬೇಕು. ಜೀವನದಲ್ಲಿ ಉತ್ಸಾಹ ಇಲ್ಲದಿದ್ದರೆ ನೆಮ್ಮದಿಯಿಲ್ಲ. ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಚಿನ್ನವಿಲ್ಲದೇ ಮನುಷ್ಯ ಬದುಕಬಹುದು. ಆದರೆ ಅನ್ನ ಇಲ್ಲದೇ ಬದುಕಲು ಸಾಧ್ಯವಾಗದು. ಮಣ್ಣು, ನೀರು, ಗಾಳಿ, ಬೆಂಕಿ ಮತ್ತು ಕಲ್ಲಿನಲ್ಲಿಯೂ ದೇವರನ್ನು ಕಂಡು ಪೂಜಿಸಿದವರು ಭಾರತೀಯರು. ಮನುಷ್ಯನ ಮನಸ್ಸೆಂಬ ಚಂಚಲ ಅಲೆಗಳ ಹೊಯ್ದಾಟವನ್ನು ಪ್ರಶಾಂತಗೊಳಿಸುವ ಮಾರ್ಗವೇ ಆಧ್ಯಾತ್ಮವಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹಾಗೂ ಶಾಸಕರು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಸಮಾರಂಭವನ್ನು ಜಂಟಿಯಾಗಿ ಉದ್ಘಾಟಿಸಿದರು. ಡಾ. ಶರಣ ಪ್ರಕಾಶ ಪಾಟೀಲ ಮಾತನಾಡಿ, ನಾಡು-ನುಡಿಗೆ ವೀರಶೈವ ಮಠಗಳ ಕೊಡುಗೆ ಅಪಾರ. ಸಂಸ್ಕಾರದ ಮೂಲಕ ಭಕ್ತರ ಬಾಳಿನಲ್ಲಿ ಬೆಳಕು ಮೂಡಿಸಿವೆ. ವೀರಶೈವ ಧರ್ಮದ ಪೀಠ ಮಠಗಳು ಸಮಾಜದ ಉಜ್ವಲ ಭವಿಷ್ಯಕ್ಕೆ ಶ್ರಮಿಸುತ್ತಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆ ಮತ್ತು ಶರಣರ ಚಿಂತನೆಗಳು ಒಚಿದೇ ಆಗಿವೆಯೇ ಹೊರತು ಬೇರೆಯಲ್ಲ ಎಂದರು.
ಸಮಾರಂಭದಲ್ಲಿ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ರೇವಣಸಿದ್ಧೇಶ್ವರ ಶಿವಾಚಾರ್ಯರು, ದೇವಾಪುರ-ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ಚೌಡಾಪುರ ಹಿರೇಮಠದ ರಾಜಶೇಖರ ಶಿವಾಚಾರ್ಯರು, ತೊನಸನಹಳ್ಳಿ ಎಸ್. ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ತೆಂಗಳಿ-ಮಂಗಲಗಿಯ ಶಾಂತಸೋಮನಾಥ ಶಿವಾಚಾರ್ಯರು, ತೊಟ್ಟಳ್ಳಿ ತ್ರಿಮೂರ್ತಿ ಶಿವಾಚಾರ್ಯರು, ಮುದ್ದಡಗಾದ ಸದ್ಯೋಜಾತ ರೇಣುಕ ಶಿವಾಚಾರ್ಯರು, ಅಬ್ಬೆತುಮಕೂರಿನ ಗಂಗಾಧರ ಶಿವಾಚಾರ್ಯರು, ಗೋಕುಳದ ಘನಲಿಂಗ ದೇವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷ ದಿನೇಶ ಪಾಟೀಲ ಸಣ್ಣೂರು, ಶಿವಶರಣಪ್ಪ ಸೀರಿ, ಮಹಾಂತಪ್ಪ ಸಂಗಾವಿ, ರಾಜಶೇಖರ ನಿಲಂಗಿ, ಶಿವಲಿಂಗರೆಡ್ಡಿ ಬೆನಕನಹಳ್ಳಿ, ಬಸವರಾಜ ರೇವಗೊಂಡ, ಸೇಡಂನ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾ.ಅ ಬ್ಯಾಂಕ್ ಯೋಜನಾಧಿಕಾರಿಗಳು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ನೇತೃತ್ವ ವಹಿಸಿದ್ದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜೀವನ ಉನ್ನತಿಗೆ, ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ. ವೀರಶೈವ ಧರ್ಮದ ಆದರ್ಶ ಮೌಲ್ಯಗಳು ಜೀವನದ ಉಜ್ವಲ ಭವಿಷ್ಯಕ್ಕೆ ಕಾರಣವಾಗಿವೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಮತ್ತು ಭಕ್ತರ ಸಹಕಾರದಿಂದ ಶ್ರೀಮಠದ ಪ್ರಗತಿ ಮತ್ತು ಭಕ್ತರಿಗೆ ಸಂಸ್ಕಾರ ಕೊಡುವ ಸತ್ಕಾರ್ಯಗಳು ನಿರಂತರ ನಡೆದಿರುವುದು ತಮಗೆ ತೃಪ್ತಿ ತಂದಿದೆ ಎಂದರು.



