HomeArt and Literature`ಬಾಲಕೃಷ್ಣ ಸಾಹಿತ್ಯ ವೇದಿಕೆ’ ನಡೆದುಬಂದ ದಾರಿ

`ಬಾಲಕೃಷ್ಣ ಸಾಹಿತ್ಯ ವೇದಿಕೆ’ ನಡೆದುಬಂದ ದಾರಿ

For Dai;y Updates Join Our whatsapp Group

Spread the love

1999ರ ಡಿಸೆಂಬರ್‌ನಲ್ಲಿ ಗದಗನಲ್ಲಿ ಭೇಟಿಯಾದ ಡಾ. ಶ್ಯಾಮಸುಂದರ ಬಿದರಕುಂದಿಯವರ ಎದುರಿಗೆ ನಿವೃತ್ತ ಶಿಕ್ಷಕ ಅರುಣ ಕುಲಕರ್ಣಿಯವರು ವಿಷಯವೊಂದನ್ನು ಪ್ರಸ್ತಾಪಿಸಿದರು. ತಮ್ಮಲ್ಲಿ ಸಾಹಿತ್ಯ, ಸಂಗೀತ, ಕಲೆಗಳ ಅಭಿರುಚಿಯನ್ನು ಬೆಳೆಸಿದ ತಮ್ಮ ತಂದೆ ಬಾಲಕೃಷ್ಣ ಅವರ ಹೆಸರಿನಲ್ಲಿ ಏನಾದರೊಂದು ಸ್ಮರಣೀಯ ಕಾರ್ಯ ಮಾಡಬೇಕೆಂಬ ಮನದಾಸೆಯನ್ನು ಅವರೆದುರಿಗೆ ವ್ಯಕ್ತಪಡಿಸಿದಾಗ ಅಸ್ತಿತ್ವಕ್ಕೆ ಬಂದಿದ್ದೇ `ಬಾಲಕೃಷ್ಣ ಸಾಹಿತ್ಯ ವೇದಿಕೆ’. ಈ ವೇದಿಕೆಯಡಿಯಲ್ಲಿ ಪ್ರತಿ ವರ್ಷ ಓರ್ವ ಸಾಹಿತಿ, ಕಲಾವಿದನನ್ನು ಗುರುತಿಸಿ ಅವರಿಗೆ `ಬಾಲಕೃಷ್ಣ ಸಾಹಿತ್ಯ ಪುರಸ್ಕಾರ’ ನೀಡುವ ಕ್ರಮವನ್ನು ಜಾರಿಗೊಳಿಸಲಾಯಿತು.

ವೇದಿಕೆ ಅಸ್ತಿತ್ವಕ್ಕೆ ಬಂದ ಮರುಕ್ಷಣದಿಂದಲೇ ಪುರಸ್ಕಾರ ಸಮಾರಂಭವನ್ನು ಏರ್ಪಡಿಸುವ ನಿರ್ಧಾರವನ್ನು ಮಾಡಲಾಯಿತು. ಅದರಂತೆ 2000ನೇ ಇಸ್ವಿಯಲ್ಲಿ ಬಾಲಕೃಷ್ಣ ಸಾಹಿತ್ಯ ಪುರಸ್ಕಾರದ ಮೊತ್ತ ಮೊದಲ ಕಾರ್ಯಕ್ರಮ ಜನವರಿಯಲ್ಲಿ ನಡೆಯಿತು. ಆಗ ಪಟ್ಟಣದಲ್ಲಿ ಜೇವರ್ಗಿಯವರ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘ ಎಂಬ ನಾಟಕ ಕಂಪನಿಯೊಂದು ಬೀಡು ಬಿಟ್ಟಿತ್ತು. ಅದರ ಮಾಲೀಕರಾದ ಶ್ರೀ ರಾಜಣ್ಣ ಜೇವರ್ಗಿಯವರು ಕುಲಕರ್ಣಿಯವರಿಗೆ ಆತ್ಮೀಯರಾಗಿದ್ದರು. ಹೀಗಾಗಿ ಈ ನಾಟಕ ಶಾಲೆಯಲ್ಲಿಯೇ ವೇದಿಕೆಯ ಮೊದಲ ಕಾರ್ಯಕ್ರಮ ಜರುಗಿತು.

ಕತೆಗಾರ ರಾಮಚಂದ್ರ ಭಾವೆಯವರಿಗೆ ಮೊದಲ ಪುರಸ್ಕಾರ ನೀಡುವ ಮೂಲಕ ಪ್ರಾರಂಭವಾದ ಬಾಲಕೃಷ್ಣ ಸಾಹಿತ್ಯ ವೇದಿಕೆಯ ಪುರಸ್ಕಾರವು 2017ರವರೆಗೆ ಅವ್ಯಾಹತವಾಗಿ 18 ವರ್ಷಗಳ ಕಾಲ ಮುನ್ನಡೆಯಿತು. ಭಾವಕವಿ ಶ್ರೀ ಸತ್ಯಾನಂದ ಪಾತ್ರೋಟ, ಸಂಶೋಧಕಿ ಹನುಮಾಕ್ಷಿ ಗೋಗಿ, ನಾಡಿನ ಹಾಸ್ಯ ದಿಗ್ಗಜ ಗಂಗಾವತಿಯ ಪ್ರಾಣೇಶ, ರಂಗಕರ್ಮಿ ಪಿ. ಗಂಗಾಧರ ಸ್ವಾಮಿ, ಕವಿ ಧರಣೇಂದ್ರ ಕುರಕುರಿ, ಲೇಖಕ ವೆಂಕಟೇಶ ಮಾಚಕನೂರ, ಸಂಶೋಧಕ ಡಾ. ಶೀಲಾಕಾಂತ ಪತ್ತಾರ ಹೀಗೆ ಎಲೆಮರೆಯ ಕಾಯಿಯಂತಿದ್ದ ಅನೇಕ ಸಾಧಕರನ್ನು ಗುರುತಿಸಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಸಮಾಜದಲ್ಲಿ ತಮ್ಮ ಸಾಧನೆಯ ಮೂಲಕ ಹೆಸರು ಮಾಡಿದ ಅನೇಕ ಸಾಧಕರಿಗೂ ಸನ್ಮಾನ ನೆರವೇರಿತು.

ಬಾಲಕೃಷ್ಣ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭಕ್ಕೆ ನಾಡಿನ ಹೆಸರಾಂತ ಸಾಹಿತಿಗಳು ಆಗಮಿಸಿದ್ದು, ಅವರನ್ನು ಕಣ್ಣಾರೆ ಕಾಣುವ ಭಾಗ್ಯ ನರೇಗಲ್ಲ-ಕೋಡಿಕೊಪ್ಪದ ಜನತೆಯದ್ದಾಯಿತು. ಹನಿಗವನಗಳ ರಾಜ ಡುಂಡಿರಾಜ, ಚಂದ್ರಶೇಖರ ವಸ್ತ್ರದ, ಶ್ರೀನಿವಾಸ ವಾಡಪ್ಪಿ ಸೇರಿದಂತೆ ನಾಡಿನ ಅನೇಕ ಹಿರಿ-ಕಿರಿಯ ಸಾಹಿತಿಗಳು ನರೇಗಲ್ಲಿಗೆ ಬಂದು ತಮ್ಮ ಮಾತುಗಳ ಮೂಲಕ ಸಾಹಿತ್ಯದ ರಸದೌತಣವನ್ನು ಉಣಬಡಿಸಿದರು.

ಹಾಲಕೆರೆಯ ಅಂದಿನ ಪೀಠಾಧಿಪತಿಗಳಾಗಿದ್ದ ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರೂ ಸಹ ಒಂದು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ, ವೇದಿಕೆಯ ಚಟುವಟಿಕೆಗಳನ್ನು ಕಂಡು ಬೆನ್ನುತಟ್ಟಿದ್ದು ತಮ್ಮ ಜೀವನದ ಸೌಭಾಗ್ಯ ಎಂದು ನೆನೆಯುತ್ತಾರೆ ಕುಲಕರ್ಣಿಯವರು. ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರ ಮಾರ್ಗದರ್ಶನ-ಆಶೀರ್ವಾದ, ಭೈರನಹಟ್ಟಿಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳವರ ಮಾರ್ಗದರ್ಶನವನ್ನೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ನಾಟಕ ಮಂಟಪದಲ್ಲಿ ಮೊದಲ ಕಾರ್ಯಕ್ರಮದ ನಂತರ ವೇದಿಕೆಯ ಕಾರ್ಯಕ್ರಮ ತರುವಾಯ ಗಾಂಧಿ ಭವನಕ್ಕೆ ಸ್ಥಳಾಂತರಗೊಂಡಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು, ಸಿಬ್ಬಂದಿಯವರು ನೀಡಿದ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ. ಆದರೆ ಗಾಂಧಿ ಭವನದ ಈಗಿನ ಸ್ಥಿತಿಯನ್ನು ಕಂಡು ಮನ ಮರಗುತ್ತಿದೆ ಎನ್ನುತ್ತಾರೆ ಕುಲಕರ್ಣಿಯವರು.

2018ರಲ್ಲಿ ಕುಲಕರ್ಣಿಯವರ ತಾಯಿಯವರಾದ ಮೈನಾವತಿ ಕುಲಕರ್ಣಿಯವರು ವಯೋಸಹಜ ಅನಾರೋಗ್ಯಕ್ಕೆ ತುತ್ತಾದರು. ಹೀಗಾಗಿ ಅಂದಿನಿಂದ ಕೆಲವು ವರ್ಷಗಳ ಕಾಲ ವೇದಿಕೆಯ ಚಟುವಟಿಕೆಗಳನ್ನು ನಿಲ್ಲಿಸಬೇಕಾಯಿತು. ಅವರು ಬಾಲಕೃಷ್ಣ ಸಾಹಿತ್ಯ ವೇದಿಕೆಯ ಅಧ್ಯಕ್ಷರೂ ಆಗಿದ್ದರು. 2019ರ ಡಿಸೆಂಬರ್ 22ರಂದು ಅವರ ತಾಯಿಯವರು ನಿಧನರಾದ ಪ್ರಯುಕ್ತ ವೇದಿಕೆಯ ಕಾರ್ಯಕ್ರಮಗಳನ್ನು ನಿಲ್ಲಿಸಲಾಯಿತು. ಮತ್ತೆ ಕಾರ್ಯಕ್ರಮ ಪ್ರಾರಂಭಿಸಬೇಕೆಂದರೆ ಕೊರೊನಾ ಮಾರಿ ವಕ್ಕರಿಸಿತು. ಎರಡು ಮೂರು ವರ್ಷ ಬಿಡದೆ ಕಾಡಿದ ಮಾರಿಯ ಕಾರಣದಿಂದ, ಇನ್ನಿತರ ಕಾರಣಗಳಿಂದ ವೇದಿಕೆಯ ಕಾರ್ಯಗಳು ಕುಂಠಿತಗೊಂಡವು.

2020ರಲ್ಲಿ ಇಂದಿನ ಬಾಲಕೃಷ್ಣ ಸಾಹಿತ್ಯ ಪುರಸ್ಕೃತರಾದ ಅನಂತ ದೇಶಪಾಂಡೆಯವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಕಾರ್ಯಕ್ರಮ ಮುಂದಕ್ಕೆ ಹೋಯಿತು. ಅಂದು ಮುಂದಕ್ಕೆ ಹೋದ ಕಾರ್ಯಕ್ರಮ ಈ ವರ್ಷ ಎಪ್ರಿಲ್ 26ರಂದು ಮತ್ತೆ ಪರಮಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರ ಆಶೀರ್ವಾದದಿಂದ ಪ್ರಾರಂಭಗೊಳ್ಳುತ್ತಿರುವುದು ವೇದಿಕೆಯ ಅಭಿಮಾನಿಗಳಲ್ಲಿ ಸಂತಸ ತುಂಬಿದೆ. ಶ್ರೀ ಅನ್ನದಾನೇಶ್ವರ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತಿರುವ 2025ರ ಬಾಲಕೃಷ್ಣ ಸಾಹಿತ್ಯ ಪುರಸ್ಕಾರ ಸಮಾರಂಭಕ್ಕೆ ನೀವೂ ಬನ್ನಿ, ನಿಮ್ಮವರೆಲ್ಲರನ್ನೂ ಕರೆತನ್ನಿ.

– ಚಿದಂಬರ ಕುಲಕರ್ಣಿ.

ನರೇಗಲ್ಲ-ಕೋಡಿಕೊಪ್ಪ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!