ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ನಿರಂತರ ಮಳೆಯಿಂದಾಗಿ ತಾಲೂಕಿನಲ್ಲಿ ಹಾದು ಹೋಗಿರುವ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ಹಲುವಾಗಲು ಮತ್ತು ಗರ್ಭಗುಡಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಬಿ.ವಿ. ಗಿರೀಶ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗಿರೀಶ್‌ಬಾಬು, ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನದಿ ಪಾತ್ರಕ್ಕೆ ಹೊಂದಿಕೊಂಡಿರುವ ನಿಟ್ಟೂರು, ಬಸಾಪುರ, ತಾವರಗೊಂದಿ, ನಂದ್ಯಾಲ, ಹಲುವಾಗಲು ಮತ್ತು ಗರ್ಭಗುಡಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದರು.
ನದಿ ಪಾತ್ರದ ಭಾಗದಲ್ಲಿ ಕೆಲವೆಡೆ ಭತ್ತ, ಮೆಕ್ಕೆಜೋಳ, ಅಡಕೆ ಬೆಳೆಗಳಿಗೆ ನೀರು ನುಗ್ಗಿದೆ. ಈ ಬಗ್ಗೆ ಸಮೀಕ್ಷೆ ಕೈಗೊಳ್ಳಲು ಕ್ರಮವಹಿಸಲಾಗುವುದು. ಹಲುವಾಗಲು ಹಾಗೂ ಗರ್ಭಗುಡಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತೆಲಗಿ ಹೋಬಳಿ ಕಂದಾಯ ನಿರೀಕ್ಷಕ ನಾಗರಾಜ, ಗ್ರಾಮ ಆಡಳಿತಾಧಿಕಾರಿ ರೇಖಮ್ಮ, ಗ್ರಾ.ಪಂ ಸಿಬ್ಬಂದಿ ಇದ್ದರು.



