ವಿಜಯಸಾಕ್ಷಿ ಸುದ್ದಿ, ಗದಗ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿಯೇ ನಿರಂತರ ಏಳು ಗಂಟೆಗಳ ಕಾಲ ವಿದ್ಯುತ್ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕುಸುಮ್-ಬಿ ಹಾಗೂ ಕುಸುಮ್-ಸಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯುತ್ ಮಾರ್ಗ ಜಾಲದಿಂದ 500 ಮೀ ವ್ಯಾಪ್ತಿಯ ಹೊರಗಿರುವ ಪಂಪ್‌ಸೆಟ್‌ಗಳಿಗೆ ಕುಸುಮ್-ಬಿ ಯೋಜನೆಯಡಿ ಸೋಲಾರ್ ವಿದ್ಯುತ್ ಕಲ್ಪಿಸಲಾಗುವುದು. ಈ ಯೋಜನೆಗೆ ನಮ್ಮ ಸರ್ಕಾರದಿಂದ ನೀಡಲಾಗುವ ಸಬ್ಸಿಡಿಯನ್ನು ಶೇ.30ರಿಂದ ಶೇ. 5 ಕ್ಕೆ ಹೆಚ್ಚಳ ಮಾಡಿದೆ. ಕುಸುಮ್-ಸಿ ಯೋಜನೆಯಡಿ ಕೃಷಿ ಫೀಡರ್‌ಗಳ ಸೌರೀಕರಣ ಕಾರ್ಯ ನಡೆಯುತ್ತಿದ್ದು, ಇದರಿಂದಾಗಿ ಹಗಲು ವೇಳೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ ಎಂದರು.
2023ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 4.5 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳು ಇದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿ ಮೂಲ ಸೌರ್ಯ ಒದಗಿಸಲಾಗಿದೆ. ಇನ್ನೊಂದು ವರ್ಷದಲ್ಲಿ ಉಳಿದ ಪಂಪ್‌ಸೆಟ್‌ಗಳನ್ನೂ ಸಕ್ರಮಗೊಳಿಸುವ ಕಾರ್ಯ ಪೂರ್ಣಗೊಳ್ಳಲಿವೆ. ಇದರೊಂದಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಪಡೆಯಲು ಬಯಸಿದ ರೈತರಿಗಾಗಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದ್ದೇವೆ. ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್ ಜಾಲ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂಗಳಿಂದ ಟ್ರಾನ್ಸ್ ಫಾರ್ಮರ್‌ಗಳನ್ನು ನೀಡಲಾಗುತ್ತಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಸಮರ್ಪಕ ವಿದ್ಯುತ್ ಪೂರೈಕೆಗಾಗಿ ರಾಜ್ಯದಲ್ಲಿ ಮೂಲ ಸೌಕರ್ಯ ಹೆಚ್ಚಿಸಲಾಗುತ್ತಿದ್ದು, ಕೆಪಿಟಿಸಿಎಲ್ ವತಿಯಿಂದ ಹೊಸದಾಗಿ 100 ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪವನ ಹಾಗೂ ಸೌರ ವಿದ್ಯುತ್‌ನ್ನು ಬ್ಯಾಟರಿ ಮೂಲಕ ಸಂಗ್ರಹ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ಸುಲಭ ಮತ್ತು ಸಮಪರ್ಕ ವಿದ್ಯುತ್ ಸರಬರಾಜು ಮಾಡುವ ದೃಷ್ಟಿಯಿಂದ ಬೇಡಿಕೆ ಇರುವಷ್ಟು ಟ್ರಾನ್ಸ್ಫಾರ್ಮರ್‌ಗಳನ್ನು ಪೂರೈಸಲಾಗುವುದು. ರೈತರಿಗೆ ಹೊರೆಯಾಗದಂತೆ ಇಲಾಖೆಯ ವಾಹನದಲ್ಲಿಯೇ ಟ್ರಾನ್ಸ್ಫಾರ್ಮರ್ ಸಾಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇಂಧನ ಇಲಾಖೆಯ 3 ಸಾವಿರ ಲೈನ್‌ಮೆನ್‌ಗಳ ನೇಮಕಾತಿ ಪ್ರಕ್ರಿಯೆ ಇನ್ನೊಂದು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗೃಹ ಜ್ಯೋತಿ ರಾಜ್ಯದಲ್ಲಿ ಶೇ. 99ರಷ್ಟು ಸಾಧನೆಯಾಗಿದೆ. ಗದಗ ಜಿಲ್ಲೆಯಲ್ಲಿ ಒಟ್ಟು ಶೇ. 98.49ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.
ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರಾತ್ರಿ ಹೊತ್ತಿನಲ್ಲಿ ತೋಟದ ಮನೆಗಳಿಗೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು. 24 ಗಂಟೆಯೊಳಗೆ ರೈತರಿಗೆ ಟ್ರಾನ್ಸ್ಫಾರ್ಮರ್ ಸಿಗುವಂತಾಗಬೇಕು ಎಂದರು.
ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಫೀರ್ ಎಸ್.ಖಾದ್ರಿ, ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ ಪಾಂಡೆ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಸೇರಿದಂತೆ ಹೆಸ್ಕಾಂ, ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಇದ್ದರು.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್ ಅತಿಥಿಗಳನ್ನು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ ಪವನ ಹಾಗೂ ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಅವಕಾಶ ಇದೆ. ಇದರ ಲಾಭ ಇಲ್ಲಿನ ರೈತರಿಗೆ ಸಿಗುವಂತಾಗಬೇಕು. ಈ ಯೋಜನೆಗಳಿಗೆ ಜಮೀನು ನೀಡುವ ರೈತರಿಗೆ ಯೋಜನೆಯಲ್ಲಿ ಶೇ. 10ರಷ್ಟು ಪಾಲುದಾರಿಕೆ ನೀಡಬೇಕು. ವಿದ್ಯುತ್ ಉತ್ಪಾದಿಸುವ ಉತ್ತರ ಕನ್ನಡ ಜಿಲ್ಲೆಗೆ ಈ ಹಿಂದೆ ಕೆಲವು ರಿಯಾಯತಿ ನೀಡಲಾಗುತ್ತಿತ್ತು. ಅದೇ ರೀತಿ ಗದಗ ಜಿಲ್ಲೆಗೂ ರಿಯಾಯತಿ ಸಿಗಬೇಕು ಎಂದರು.
ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಕೇವಲ ಒಂದು ತಿಂಗಳು ಮಾತ್ರ ವಿದ್ಯುತ್ ಕೊರತೆ ಉಂಟಾಗಿತ್ತು. ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆದು ಸಮಸ್ಯೆ ಬಗೆಹರಿಸಲಾಗಿತ್ತು. ಸದ್ಯ ನಮ್ಮಲ್ಲಿ ವಿದ್ಯುತ್ ಕೊರತೆಯಿಲ್ಲ. ರೈತರಿಗೆ ನಿರಂತರವಾಗಿ ವಿದ್ಯುತ್ ಕಲ್ಪಿಸುವ ಉದ್ದೇಶದಿಂದ ಹೆಚ್ಚು ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ.
– ಕೆ.ಜೆ. ಜಾರ್ಜ್.
ಇಂಧನ ಸಚಿವರು.



