ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮಾಜದವರನ್ನು ಸೇರ್ಪಡೆ ಮಾಡುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ವಾಲ್ಮೀಕಿ ನಾಯಕ ಸಮಾಜ ತಾಲೂಕು ಘಟಕದ ವತಿಯಿಂದ ಹರಪನಹಳ್ಳಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಹರಿಹರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಹೊಸಪೇಟೆ ರಸ್ತೆಯ ಮುಖಾಂತರ ಐಬಿ ವೃತ್ತಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ವೈ.ಡಿ. ಅಣ್ಣಪ್ಪ ಮಾತನಾಡಿ, ವಾಲ್ಮೀಕಿ ನಾಯಕ ಜನಾಂಗಕ್ಕೆ ಸರ್ಕಾರ ಅನ್ಯ ಸಮುದಾಯಗಳನ್ನು ಸೇರಿಸಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಬಾರದು. ಇತರೆ ಸಮುದಾಯಗಳಿಗೆ ಎಷ್ಟಾದರೂ ಸೌಲಭ್ಯ ಅಥವಾ ಮೀಸಲಾತಿ ನೀಡಲಿ, ಆದರೆ ನಮ್ಮ ಸಮಾಜದ ಜೊತೆ ಬೇರೆ ಯಾವ ಸಮುದಾಯವನ್ನು ಸೇರಿಸಬಾರದು ಎಂದು ಹೇಳಿದರು.
ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಹಲುವಾಗಲು ಹೆಚ್.ಟಿ. ವನಜಾಕ್ಷಿ ಶಿವಯೋಗಿ ಮಾತನಾಡಿ, ನಮ್ಮ ಮೀಸಲಾತಿಯನ್ನು ಅನ್ಯ ಸಮಾಜಕ್ಕೆ ಕೊಟ್ಟರೆ ನಾವು ಸಹಿಸುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಜಾತಿ ನಡುವೆ ವಿಷಬೀಜ ಬಿತ್ತಲು ಮುಂದಾಗಿದ್ದಾರೆ. ಕೂಡಲೇ ಮೀಸಲಾತಿಯನ್ನು ಹಿಂಪಡೆಯದೆ ಹೋದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ್ ಮಾತನಾಡಿ, ವಾಲ್ಮೀಕಿ ಸಮಾಜವು ತನ್ನದೇ ಸಂಸ್ಕೃತಿ, ಸಂಸ್ಕಾರದ ಪರಂಪರೆಯನ್ನು ಹೊಂದಿದ್ದು, ಈಗಲೇ ಸಾಕಷ್ಟು ಬುಡಕಟ್ಟು ಜನಾಂಗದಿಂದ ಕೂಡಿದೆ. ಸಂವಿಧಾನಾತ್ಮಕವಾಗಿ ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮುದಾಯದವರನ್ನು ಸೇರಿಸುವಂತಿಲ್ಲ. ಅದನ್ನು ಮೀರಿ ರಾಜ್ಯ ಸರ್ಕಾರ ಇತರೆ ಸಮಾಜ ಸೇರಿಸಲು ಮುಂದಾದರೆ ಅದಕ್ಕೆ ಪಾಠವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯನ್ನುದ್ದೇಶಿಸಿ ಮುಖಂಡರಾದ ಬಸವರಾಜ ಸಂಗಪ್ಪನವರ್, ಆರ್.ಲೋಕೇಶ್, ಕಂಚಿಕೇರಿ ಜಯಲಕ್ಷ್ಮೀ, ಶಿರಹಟ್ಟಿ ದಂಡೆಪ್ಪ, ನಿಟ್ಟೂರು ಸಣ್ಣ ಹಾಲಪ್ಪ ಮಾತನಾಡಿದರು.
ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಮುಖಂಡರಾದ ತೆಲಿಗಿ ಉಮಕಾಂತ, ಲಕ್ಷ್ಮೀ ಚಂದ್ರಶೇಖರ, ವಕೀಲ ಪ್ರಾಣೇಶ್, ನೀಲಗುಂದ ವಾಗೀಶ, ಫಣಿಯಪುರ ಲಿಂಗರಾಜ, ಬಾಣದ ಅಂಜಿನಪ್ಪ, ಹಿರೇಮೆಗಳಗೇರಿ ಹನುಮಂತಪ್ಪ, ಹೆಚ್.ಕೆ. ಮಂಜುನಾಥ, ಇಟ್ಟಿಗುಡಿ ಅಂಜಿನಪ್ಪ, ಗಿಡ್ಡಹಳ್ಳಿ ನಾಗರಾಜ, ಮಾಗಳದ ಮೃತ್ಯುಂಜಯ, ಗಿರಜ್ಜಿ ನಾಗರಾಜ, ತೆಲಿಗಿ ಯೋಗೀಶ, ಅರುಣ ಪೂಜಾರ, ರಾಯದುರ್ಗದ ಪ್ರಕಾಶ, ಕನಕನಬಸಾಪುರ ಮಂಜುನಾಥ, ಬಾಲೆನಹಳ್ಳಿ ಕೆಂಚನಗೌಡ, ಶಿವರಾಜ, ಗುಂಡಗತ್ತಿ ನೇತ್ರಾವತಿ, ಶೋಭ, ಮಂಜುಳಾ, ರೇಖಮ್ಮ, ಶಾಂತಮ್ಮ, ಮತ್ತಿಹಳ್ಳಿ ಬೆಟ್ಟನಗೌಡ, ವೃಷಬೇಂದ್ರ, ಕಿತ್ತೂರು ಓಬಣ್ಣ, ಚನ್ನಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಗತಿಪರ ಚಿಂತಕ, ಸಮಾಜದ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಎಸ್‌ಟಿ ಸಮುದಾಯ ಈಗಾಗಲೇ 52 ಉಪಪಂಗಡಗಳನ್ನು ಹೊಂದಿದ್ದು, ಸಾಕಷ್ಟು ಪ್ರಬಲ ಪೈಪೋಟಿ ಇದೆ. ಸಿದ್ದರಾಮಯ್ಯವರು ಶೋಷಿತ ವರ್ಗದ ಪರ ಎಂದು ಕೇವಲ ಮಾತಿಗಷ್ಟೇ ಹೇಳಿ ಇಂದು ದಮನಿತ ವರ್ಗದ ದ್ವನಿಯನ್ನು ದಮನ ಮಾಡುವ ಕಾರ್ಯ ಖಂಡನೀಯ. ಅನ್ಯ ಜಾತಿಗಳನ್ನು ನಮ್ಮ ಸಮಾಜದಲ್ಲಿ ಸೇರ್ಪಡೆ ಮಾಡುವ ಕಾರ್ಯವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದರು.



