ವಿದೇಶಿ ಲೀಗ್ ನಲ್ಲಿ 1 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದ ಅಶ್ವಿನ್ ಅನ್ಸೋಲ್ಡ್ ಆಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ಗೆ ಗುಡ್ ಬೈ ಹೇಳಿ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ನಿರಾಸೆಯಾಗಿದೆ. ಅದು ಕೂಡ ಅನ್ಸೋಲ್ಡ್ ಆಗುವ ಮೂಲಕ.
ಯುಎಇ ಕ್ರಿಕೆಟ್ ಬೋರ್ಡ್ ಆಯೋಜಿಸುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಗಾಗಿ ರವಿಚಂದ್ರನ್ ಅಶ್ವಿನ್ ಹೆಸರು ನೋಂದಾಯಿಸಿಕೊಂಡಿದ್ದರು. ಅದು ಸಹ 120,000 ಯುಎಸ್ ಡಾಲರ್ ಮೂಲ ಬೆಲೆಯೊಂದಿಗೆ. ಅಂದರೆ ಅಶ್ವಿನ್ ಅವರ ಆರಂಭಿಕ ಹರಾಜು ಮೊತ್ತ ಬರೋಬ್ಬರಿ 1.06 ಕೋಟಿ ರೂ. ಆಗಿತ್ತು.
ಬುಧವಾರ ದುಬೈನಲ್ಲಿ ನಡೆದ ಹರಾಜಿನಲ್ಲಿ 1.06 ಕೋಟಿ ರೂ. ನೀಡಿ ಅಶ್ವಿನ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬಂದಿಲ್ಲ. ಅಲ್ಲದೆ ಮೊದಲ ಸುತ್ತಿನಲ್ಲೇ ಅವರು ಅನ್ಸೋಲ್ಡ್ ಆಗಿ ಉಳಿದರು. ಇದಾಗ್ಯೂ ಕೊನೆಯ ಸುತ್ತಿನಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದ ಅಶ್ವಿನ್ ಅವರನ್ನು ಯಾವುದೇ ಫ್ರಾಂಚೈಸಿ ಪರಿಗಣಿಸಿಲ್ಲ ಎಂಬುದೇ ಅಚ್ಚರಿ ಮೂಡಿಸಿದೆ.



