ಬೆಂಗಳೂರು: ಕಾಂಗ್ರೆಸ್ ಗೆ ಕೆಟ್ಟ ಹೆಸರು ಬರಲು ಬೆಂಗಳೂರಿನ ರಸ್ತೆ ಗುಂಡಿಗಳು ಕಾರಣ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಗರದಲ್ಲಿರುವ ರಸ್ತೆಗುಂಡಿಗಳಿಂದ ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬಂದಿದೆ. ಗುಂಡಿಗಳು ಇಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಿಕೆಯದ್ದು ಮತ್ತು ರಾಜ್ಯ ಸರ್ಕಾರದ್ದು. ಬಿಜೆಪಿ ಸರ್ಕಾರ ಇದ್ದಾಗ ಗುಂಡಿಗಳ ಬಗ್ಗೆ ಹೈಕೋರ್ಟ್ ಮಾನಿಟರ್ ಮಾಡಿತ್ತು.
ಎರಡು ವರ್ಷ ಹೈಕೋರ್ಟ್ ಮಾನಿಟರ್ ಮಾಡಿದೆ. ಮುಖ್ಯ ಆಯುಕ್ತರನ್ನ ಕರೆಸಿ ಚೀಫ್ ಜಸ್ಟೀಸ್ ಮಾನಿಟರ್ ಮಾಡ್ತಿದ್ದರು. ಅದನ್ನ ನೋಡಿ ನಾವು ಗುಂಡಿ ಬೀಳದಂತೆ ನೋಡಿಕೊಳ್ಳಬೇಕಿತ್ತು. ರಸ್ತೆ ಗುಂಡಿಗಳಿಂದ ಬಿಜೆಪಿಗೂ ಹಿಂದೆ ಕೆಟ್ಟ ಹೆಸರು ಬಂದಿತ್ತು. ಈಗ ನಮಗೂ ಟೀಕೆ ಟಿಪ್ಪಣಿಗಳು ಬರುತ್ತಿವೆ ಎಂದರು. ರಸ್ತೆಗುಂಡಿಗಳು ಬೀಳದ ಹಾಗೇ ನೋಡೋ ಜವಾಬ್ದಾರಿ ನಮ್ಮದಾಗಿತ್ತು. ಸಿಎಂ, ಡಿಸಿಎಂ ಅಕ್ಟೋಬರ್ ಒಳಗೆ ಎಲ್ಲಾ ಗುಂಡಿ ಮುಚ್ಚಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ಮುಚ್ಚುವ ಕೆಲಸ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ ಆರ್‌ಎಸ್‌ಎಸ್‌ಗೆ 100 ವರ್ಷ ಪೂರೈಕೆ ಬಗ್ಗೆ ಮಾತನಾಡಿ, ಆರ್‌ಎಸ್‌ಎಸ್ ದೊಡ್ಡ ಸಂಘಟನೆ ದೊಡ್ಡ ಮಾತಿಲ್ಲ. ಆದರೆ ಆರ್‌ಎಸ್‌ಎಸ್ ಅವರು ಸ್ವಾತಂತ್ರ‍್ಯ ಪೂರ್ವ ಚಳುವಳಿಯಲ್ಲಿ ಭಾಗಿಯಾಗೇ ಇಲ್ಲ. ಶಾಲಾ ಮಕ್ಕಳು ಸ್ವಾತಂತ್ರ‍್ಯ ಪೂರ್ವ ಚಳುವಳಿಯಲ್ಲಿ ಭಾಗಿಯಾಗಿದ್ದರು. ಇಷ್ಡು ದೊಡ್ಡ ಸಂಘಟನೆ ಚಳುವಳಿಯಲ್ಲಿ ಭಾಗಿಯಾಗದೇ ಇರೋದು ದುರಾದೃಷ್ಟ ಎಂದರು.



