HomeGadag Newsಪ್ರಿಯಾಂಕ್ ಖರ್ಗೆ ವಿರುದ್ಧ ನರಗುಂದ ಶಾಸಕ ಸಿ.ಸಿ. ಪಾಟೀಲ ವಾಗ್ದಾಳಿ

ಪ್ರಿಯಾಂಕ್ ಖರ್ಗೆ ವಿರುದ್ಧ ನರಗುಂದ ಶಾಸಕ ಸಿ.ಸಿ. ಪಾಟೀಲ ವಾಗ್ದಾಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೇಶಭಕ್ತ ಸಂಘಟನೆ ಆರ್‌ಎಸ್‌ಎಸ್ ನಿಷೇಧಿಸುವಂತೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ತಾಕತ್ತಿದ್ದರೆ ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಮಾಡಲಿ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಸವಾಲು ಹಾಕಿದರು.

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಭಾರತದ ಅಖಂಡತೆ ಮತ್ತು ಏಕತೆಯನ್ನು ಗೌರವಿಸುತ್ತದೆ. ನೆಹರೂ ಸಹ ಈ ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಿಂದಿನ ಹತ್ತಾರು ಜನ ಕಾಂಗ್ರೆಸ್ ನಾಯಕರಿಂದಲೇ ಆರ್‌ಎಸ್‌ಎಸ್ ನಿಷೇಧ ಮಾಡಲು ಸಾಧ್ಯವಾಗಿಲ್ಲ. ಈಗ ಪ್ರಿಯಾಂಕ್ ಖರ್ಗೆಗೆ ಅದು ಸಾಧ್ಯವೇ ಎಂದು ವಾಗ್ದಾಳಿ ನಡೆಸಿದರು.

ಇನ್ನು ಪ್ರಿಯಾಂಕ್ ಖರ್ಗೆ ಬರೆದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ತಕ್ಷಣ ಷರಾ ಬರೆದು ಅಧಿಕಾರಿಗಳಿಗೆ ಕಳುಹಿಸಿರುವುದು ನೋಡಿದರೆ ಡಿಸೆಂಬರ್ (ಕ್ರಿಸ್‌ಮಸ್) ಹತ್ತಿರ ಬರುತ್ತಿರುವುದು ಸ್ಪಷ್ಟವಾಗುತ್ತದೆ. ಅಲ್ಪಸಂಖ್ಯಾತ ಮತಗಳ ಓಲೈಕೆಗಾಗಿ ಕಾಂಗ್ರೆಸ್ ಆರ್‌ಎಸ್‌ಎಸ್ ಮೇಲೆ ಮುಗಿಬಿದ್ದಿದೆ. ಇದರಿಂದ ಸಂಘಟನೆಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

2002ರಲ್ಲಿ ಬೆಂಗಳೂರಿನಲ್ಲಿ ನಡೆದ ಸಮರಸತಾ ಸಂಗಮ ಕಾರ್ಯಕ್ರಮದ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿ ಆರ್‌ಎಸ್‌ಎಸ್ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರು ಹಿಂದಿನ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಯಸ್ಸು, ಅಧಿಕಾರ, ಹಣ ಏಕಕಾಲಕ್ಕೆ ಬಂದಿರುವುದರಿಂದ ಪ್ರಿಯಾಂಕ್ ಖರ್ಗೆ ಈ ರೀತಿ ಮಾತಾಡುತ್ತಿದ್ದಾರೆ. ಮೊದಲು ತಮ್ಮ ಕ್ಷೇತ್ರದ ಶಿಕ್ಷಣ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನೋಡಲಿ. ರಾಜ್ಯದ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದವರು ಶತಮಾನದ ಇತಿಹಾಸ ಹೊಂದಿರುವ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಬೇಜವಾಬ್ದಾರಿ, ಹಣಕಾಸಿನ ನಿರ್ವಹಣೆಯಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಆಡಳಿತ ವೈಫಲ್ಯದ ಗಮನ ಬೇರೆಡೆ ಸೆಳೆಯಲು ಸರ್ಕಾರವು ತಂತ್ರಗಳನ್ನು ಅನುಸರಿಸುತ್ತಿದೆ. ಅದರಲ್ಲಿ ಆರ್‌ಎಸ್‌ಎಸ್ ಬ್ಯಾನ್ ವಿಷಯವೂೊಂದಾಗಿದೆ ಎಂದು ಆಪಾದಿಸಿದರು.

ಯಾವುದೇ ಜನಪ್ರತಿನಿಧಿಯೊಬ್ಬರಿಗೆ ಕೀಳಾಗಿ ‘ಕರಿಟೋಪಿ ಎಂಎಲ್‌ಎ’ ಎಂದು ಒಬ್ಬ ಉಪಮುಖ್ಯಮಂತ್ರಿ ಕರೆಯುವುದು ಶೋಭೆ ತರುವಂತಹದ್ದಲ್ಲ. ಒಂದು ವೇಳೆ ಕೇಂದ್ರ ಮಂತ್ರಿಯೊಬ್ಬರು ಡಿ.ಕೆ. ಶಿವಕುಮಾರ ಅವರಿಗೆ ಶಾಲು ಹಾಕಿದ ಮಂತ್ರಿ ಎಂದು ಕರೆದರೆ ಹೇಗಾಗುತ್ತದೆ? ಜನಪ್ರತಿನಿಧಿಯೊಬ್ಬರನ್ನು ಹೀಗೆ ಕರೆದಿರುವುದು ಅಧಿಕಾರದ ಮದ ಏರಿರುವುದನ್ನು ತೋರಿಸುತ್ತದೆ ಎಂದು ಸಿ.ಸಿ. ಪಾಟೀಲ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ಸಿದ್ದಪ್ಪ ಪಲ್ಲೇದ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಶಿವು ಹಿರೇಮನಿಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ನಿಜವಾಗಿಯೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ, ಆ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಕೌಶಲ್ಯ ತರಬೇತಿ ನೀಡಲಿ. ಒಂದು ವೇಳೆ ಅಲ್ಪಸಂಖ್ಯಾತರು ಶಿಕ್ಷಣವಂತರಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಿಲ್ಲ ಎನ್ನುವ ಕಾರಣಕ್ಕೆ ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಆಗಿ ಮಾತ್ರ ಬಳಸಿ ತುಳಿಯುವ ಪ್ರಯತ್ನವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!