ಬೆಳಗಾವಿ: ಬೆಳಗಾವಿಯಲ್ಲಿ ಫೈನಾನ್ಸ್ ಹಾವಳಿ ನಿಲ್ಲುತ್ತಿಲ್ಲ, ಇದೀಗ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ರೈತ ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿ ಬಂದಿದ್ದು, ಸಾತೇರಿ ಹೊನ್ನಪ್ಪ ರುಟಕುಟೆ (78) ಮೃತ ದುರ್ದೈವಿಯಾಗಿದ್ದು, ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಣ್ಣೂರ ಗ್ರಾಮದ ಕೋ ಆಪರೇಟಿವ್ ಫೈನಾನ್ಸ್ ಮೇಲೆ ಕಿರುಕುಳದ ಆರೋಪ ಕೇಳಿಬಂದಿದೆ. ರೈತ ಸಾತೇರಿ ಹೊನ್ನಪ್ಪ ರುಟಕುಟೆ ಫೈನಾನ್ಸ್ ನಲ್ಲಿ 12 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಆ ಪೈಕಿ 4 ಲಕ್ಷ ರೂ. ಮರುಪಾವತಿ ಮಾಡಿದ್ದರು. ಹೀಗಿದ್ದರೂ ಬಡ್ಡಿ ಮತ್ತು ಅಸಲು ಸೇರಿ ಮತ್ತೆ 16 ಲಕ್ಷ ಪಾವತಿಸುವಂತೆ ಫೈನಾನ್ಸ್ ಕಿರುಕುಳ ನೀಡಿದೆ.
ಸಾಲ ತೀರಿಸದೆ ಇದ್ದರೆ ಮನೆ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಫೈನಾನ್ಸ್ ಸಿಬ್ಬಂದಿ ಊರಿನಲ್ಲಿ ಡಂಗುರ ಸಾರಿದ್ದಾರೆ. ಹೀಗಾಗಿ ಮರ್ಯಾದೆ ಹೋಯಿತು ಎಂದು ಮನನೊಂದು ಸಾತೇರಿ ಹೊನ್ನಪ್ಪ ರುಟಕುಟೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಫೈನಾನ್ಸ್ ಸಿಬ್ಬಂದಿಯೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



