ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕುಷ್ಟರೋಗ ನಿರ್ಮೂಲನೆಗೆ ಪಣ ತೋಡಬೇಕು ಎಂದು ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ನಜೀರ ನದಾಫ್ ಹೇಳಿದರು.
ಅವರು ಪಟ್ಟಣದ ಬಸವೇಶ್ವರ ನಗರದಲ್ಲಿ ಕುಷ್ಟರೋಗ ನಿರ್ಮೂಲನಾ ಆಂದೋಲನದ ನಿಮಿತ್ತ ಮನೆ ಮನೆಗೆ ಭೇಟಿ ನೀಡಿ ಕುಷ್ಟರೋಗ ನಿರ್ಮೂಲನೆ ಹಾಗೂ ನಿಯಂತ್ರಣ ಜಾಗೃತಿ ಮೂಡಿಸಿ ಮಾತನಾಡಿದರು.
ಕುಷ್ಟರೋಗ ಬಹಳ ಹಿಂದಿನ ಕಾಲದಿಂದಲೂ ಮನುಷ್ಯರನ್ನು ಕಾಡುತ್ತಿದೆ. ಇದು ದೀರ್ಘ ಕಾಲದ ರೋಗವಾಗಿದ್ದು, ಮೈಕ್ರೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಚರ್ಮ, ಬಾಹ್ಯ ನರಗಳು, ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಲೋಳೆಪೊರೆ ಮತ್ತು ಕಣ್ಣುಗಳ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಈ ರೋಗವನ್ನು ಗುಣಪಡಿಸಬಹುದಾಗಿದ್ದು, ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಇದರಿಂದ ಉಂಟಾಗುವ ಅಂಗವೈಕಲ್ಯವನ್ನು ತಡೆಯಬಹುದು. ಸಾರ್ವಜನಿಕರು ಇಂತಹ ಖಾಯಿಲೆಯ ಗುಣಲಕ್ಷಣಗಳು ಕಂಡುಬಂದರೆ ಸಮೀಪದ ಸರಕಾರಿ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಎಂದರು.
ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ನಜೀರ ನದಾಫ್, ಟಿ. ನೇತ್ರಾವತಿ ಹಾಗೂ ಸಾರ್ವಜನಿಕರು ಇದ್ದರು.



