ನವದೆಹಲಿ:- ಸಂಸತ್ ಅಧಿವೇಶನ ಇದ್ದಾಗಲೆಲ್ಲ ರಾಹುಲ್ ಹೆಚ್ಚಾಗಿ ವಿದೇಶದಲ್ಲಿ ಇರ್ತಾರೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ಮಾಡಿದ್ದಾರೆ.
ಪ್ರಧಾನಿ ಮೋದಿ ವಿದೇಶ ಪ್ರವಾಸ ಬಗ್ಗೆ ತಗಾದೆ ತೆಗೆಯುತ್ತಿರುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ತುಸು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ ಜೋಶಿ, ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ ಅಧಿವೇಶನ ಇದ್ದಾಗಲೆಲ್ಲ ಏಕೆ ಹೆಚ್ಚು ಸಮಯ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ವಾಸ್ತವದಲ್ಲಿ ರಾಹುಲ್ ಗಾಂಧಿ ಸಂಸತ್ ಅಧಿವೇಶನಕ್ಕೆ ಆಗಾಗ್ಗೆ ಗೈರಾಗುತ್ತಲೇ ಇರುತ್ತಾರೆ. ಅವರೊಬ್ಬ ಅರೆಕಾಲಿಕ ಮತ್ತು ಬೇಜವಾಬ್ದಾರಿ ರಾಜಕೀಯ ನಾಯಕರು. ವಿಪಕ್ಷ ನಾಯಕನ ಸ್ಥಾನದಲ್ಲಿದ್ದು ಸ್ವಲ್ಪವೂ ಗಂಭೀರತೆಯೇ ಇಲ್ಲದ ರಾಜಕಾರಣಿ ಎಂದು ಆರೋಪಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ ಮಧ್ಯೆ ರಾಹುಲ್ ಗಾಂಧಿ ಜರ್ಮನಿ ಭೇಟಿ ಕೈಗೊಳ್ಳುತ್ತಾರೆ. ಬಿಹಾರ ಚುನಾವಣೆ ವೇಳೆಯೂ ವಿದೇಶದಲ್ಲಿದ್ದರು. ಇದೀಗ ಬಿಜೆಪಿ-ಚುನಾವಣಾ ಆಯೋಗ ಒಪ್ಪಂದ ಮಾಡಿಕೊಂಡಿದೆ ಎಂಬ ವೃಥಾ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್, ಸೋತಾಗಲೆಲ್ಲ ಇವಿಎಂ ಮತ್ತು ಚುನಾವಣಾ ಆಯೋಗವನ್ನು ದೂಷಿಸುವ ಅಭ್ಯಾಸ ಬೆಳೆಸಿಕೊಂಡು ಬಿಟ್ಟಿದೆ ಎಂದು ದೂರಿದರು.



