ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಡಿಸೆಂಬರ್ 27ರಂದು ಮಲೇಷ್ಯಾದಲ್ಲಿ ಭರ್ಜರಿಯಾಗಿ ನಡೆಯಿತು. ಈಗಾಗಲೇ ರಾಜಕೀಯ ಪಕ್ಷ ಸ್ಥಾಪಿಸಿರುವ ವಿಜಯ್, ಈ ಸಿನಿಮಾವೇ ತಮ್ಮ ನಟನಾ ಜೀವನದ ಕೊನೆಯ ಚಿತ್ರ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ವೇಳೆ ಮಾತನಾಡಿದ ವಿಜಯ್, “ಇದು ನನ್ನ ಕೊನೆಯ ಸಿನಿಮಾ ಎಂದು ಹೇಳುವುದೇ ನನಗೆ ಕಷ್ಟವಾಗುತ್ತಿದೆ. ಆದರೆ ನನ್ನ ಮುಂದಿನ ಜೀವನದ 30 ವರ್ಷಗಳನ್ನು ಅಭಿಮಾನಿಗಳಿಗಾಗಿ ಮತ್ತು ಸಮಾಜಕ್ಕಾಗಿ ಮೀಸಲಿಡಬೇಕಿದೆ” ಎಂದು ಹೇಳಿದರು.
ನಟನೆಗೆ ಕಾಲಿಟ್ಟ ದಿನದಿಂದ ಇಂದಿನವರೆಗೂ ಅಭಿಮಾನಿಗಳು ತಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದ ಅವರು, “ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಅಭಿಮಾನಿಗಳಿಗಾಗಿ ನಾನು ನನ್ನ ಪ್ರೀತಿಯ ಸಿನಿಮಾವನ್ನೇ ತ್ಯಜಿಸುತ್ತಿದ್ದೇನೆ. ನಾನು ಕೇವಲ ಒಳ್ಳೆಯದು ಹೇಳಲು ಬಂದವನಲ್ಲ, ಒಳ್ಳೆಯತನವನ್ನು ಸ್ಥಾಪಿಸಲು ಬಂದವ” ಎಂದು ಘೋಷಿಸಿದರು.
ಸಿನಿಮಾ ತಂಡದ ಬಗ್ಗೆ ಮಾತನಾಡಿದ ವಿಜಯ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಎಂದಿಗೂ ನಿರಾಶೆ ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ದೇಶಕ ಎಚ್. ವಿನೋದ್ ಅವರ ಸಿನಿಮಾ ಶೈಲಿಯನ್ನು ಶ್ಲಾಘಿಸಿದರು. ನಾಯಕಿ ಪೂಜಾ ಅವರ ನಟನಾ ಪ್ರತಿಭೆ ಹಾಗೂ ಅಂದವನ್ನು ಹೊಗಳಿದರು. ಮಮಿತಾ ಹಾಗೂ ಪ್ರಕಾಶ್ ರೈ ಜೊತೆಗಿನ ಕಾಂಬಿನೇಷನ್ ಕುರಿತು ಸಹ ಮಾತನಾಡಿದರು.
ಮಲೇಷ್ಯಾ ತಮಿಳು ಚಿತ್ರರಂಗಕ್ಕೆ ಪ್ರಮುಖ ಮಾರುಕಟ್ಟೆ ಎಂದು ಹೇಳಿದ ವಿಜಯ್, ತಮ್ಮ ಕೊನೆಯ ಸಿನಿಮಾದ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ವಿಶೇಷ ಕ್ಷಣ ಎಂದು ಹೇಳಿದರು. ‘ಜನ ನಾಯಗನ್’ ಸಿನಿಮಾ ಜನವರಿ 09ರಂದು ಬಿಡುಗಡೆಯಾಗಲಿದೆ.



