ಬೆಂಗಳೂರು: ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಗುವಿಗೆ ಜನ್ಮ ಸಂಬಂಧಿ ಕಾಯಿಲೆ ಇದೆ ಎಂದು ತನ್ನ ತಂದೆ ವಿಷ ಉಣಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯ ಹೂತಾಂಡಹಳ್ಳಿ ನಿವಾಸಿ ಮುನಿಕೃಷ್ಣ(30) 2 ವರ್ಷದ ಮಗುವನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಡಿಸೆಂಬರ್ 22 ರಂದು ಮುನಿಕೃಷ್ಣ ತಮಿಳುನಾಡಿನ ಬಾಗ್ಲೂರಿನ ಅಜ್ಜಿ ಮನೆಗೆ ತೆರಳಿದ್ದಾಗ, ಮಗುವಿಗೆ ವಿಷವುಣಿಸಿದ್ದ. ಬಳಿಕ ಬಾಯಿ ತೊಳೆಯುತ್ತಿದ್ದ. ಮಗುವಿನ ತಾಯಿ ಮತ್ತು ಅಜ್ಜಿ ಹೋಗಿ ನೋಡಿದಾಗ ವಿಚಾರ ತಿಳಿದು ಬಂದಿತ್ತು.
ಡಿಸೆಂಬರ್ 23 ರಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು. ಬಳಿಕ ಮುನಿಕೃಷ್ಣನನ್ನು ವಿಚಾರಿಸಿದಾಗ, ಮಗುವಿಗೆ ಜನ್ಮ ಸಂಬಂಧಿ ಖಾಯಿಲೆ ಇದೆ. ಖರ್ಚು ಮಾಡಲಿಕ್ಕೆ ಹಣವಿಲ್ಲ ಎಂದು ವಿಷ ಉಣಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಸಿದ್ದಾಪುರ ಠಾಣೆಗೆ ಮಗುವಿನ ತಾಯಿ ದೂರು ನೀಡಿದ್ದಾಳೆ.



