ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್–4ರ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಆದರೆ ಈ ಜಯದ ಸಂಭ್ರಮದ ನಡುವೆಯೇ ಆರ್‌ಸಿಬಿಗೆ ದೊಡ್ಡ ಆಘಾತ ಎದುರಾಗಿದೆ.
ತಂಡದ ಪ್ರಮುಖ ವೇಗಿ ಪೂಜಾ ವಸ್ತ್ರಾಕರ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು, ವೈದ್ಯರ ಸಲಹೆ ಮೇರೆಗೆ ಕನಿಷ್ಠ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ಐದು ಪಂದ್ಯಗಳಿಗೆ ಲಭ್ಯರಾಗುವುದಿಲ್ಲ. ಪೂಜಾ ವಸ್ತ್ರಾಕರ್ ಆರ್‌ಸಿಬಿ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದರು. ಅವರ ಅನುಪಸ್ಥಿತಿ ತಂಡದ ಬೌಲಿಂಗ್ ಸಂಯೋಜನೆಗೆ ಸವಾಲಾಗಿ ಪರಿಣಮಿಸಿದೆ.
ಮೊದಲ ಪಂದ್ಯದಲ್ಲೇ ಪೂಜಾ ಹೊರಗುಳಿದಿದ್ದ ಕಾರಣ ಇಂಗ್ಲೆಂಡ್ ವೇಗಿ ಲಿನ್ಸೆ ಸ್ಮಿತ್ ಅವರನ್ನು ಆರ್‌ಸಿಬಿ ಕಣಕ್ಕಿಳಿಸಿತ್ತು. ಆದರೆ ಸ್ಮಿತ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅವರು ಎರಡು ಓವರ್‌ಗಳಲ್ಲಿ 23 ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಪೂಜಾ ವಸ್ತ್ರಾಕರ್ ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಮುಂದಿನ ಪಂದ್ಯಗಳಲ್ಲೂ ಲಿನ್ಸೆ ಸ್ಮಿತ್ ಅವರನ್ನೇ ಆರ್‌ಸಿಬಿ ಆಡುವ ಸಾಧ್ಯತೆ ಇದೆ.



