ಬೆಂಗಳೂರು: ಗಣರಾಜ್ಯೋತ್ಸವದ ದಿನವೇ ಸಂಭವಿಸಬಹುದಾದ ಭಾರಿ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಕಾಡುಗೋಡಿ ಸಮೀಪದ ಸಾದರಮಂಗಲದಲ್ಲಿ ಬಿಎಂಟಿಸಿ ಬಸ್‌ಗೆ ಪ್ಯಾಸೆಂಜರ್ ರೈಲು ಗುದ್ದಿದ ಘಟನೆ ನಡೆದಿದೆ.
ಪ್ರಯಾಣಿಕರನ್ನು ಇಳಿಸಿದ ನಂತರ ಬಸ್ ಡಿಪೋಗೆ ತೆರಳುವ ಸಲುವಾಗಿ ರಿವರ್ಸ್ ಮಾಡುತ್ತಿದ್ದ ಸಂದರ್ಭದಲ್ಲೇ, ಹಿಂಬದಿಯಿಂದ ವೇಗವಾಗಿ ಬಂದ ಪ್ಯಾಸೆಂಜರ್ ರೈಲು ಬಸ್‌ಗೆ ಗುದ್ದಿದೆ.
ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆದರೆ ರೈಲು ಗುದ್ದಿದ ತೀವ್ರತೆಗೆ ಬಿಎಂಟಿಸಿ ಬಸ್‌ನ ಹಿಂಭಾಗ ಸಂಪೂರ್ಣವಾಗಿ ಚಿದ್ರಚಿದ್ರವಾಗಿದೆ.
ಗುದ್ದಿದ ರೈಲು ಎಸ್‌ಎಂಬಿಟಿ – ಟಾಟಾನಗರ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಬಿಎಂಟಿಸಿ ಬಸ್ ಸಾದರಮಂಗಲದಲ್ಲಿ ಪ್ರಯಾಣಿಕರನ್ನು ಇಳಿಸಿ ಡಿಪೋ ನಂಬರ್ 51ಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.



