ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಮನ್ ಪರಿಣಾಮದ ಮೂಲಕ ಜಗತ್ತಿನ ಗಮನ ಸೆಳೆದು ನೋಬಲ್ ಪಾರಿತೋಷಕಕ್ಕೆ ಪಾತ್ರರಾದ ಸರ್ ಸಿ.ವಿ. ರಾಮನ್ ಅಪ್ರತಿಮ ವಿಜ್ಞಾನಿ. ಅವರು ನಮ್ಮ ದೇಶದ ವೈಜ್ಞಾನಿಕ ಕಣ್ಮಣಿ ಎಂದು ಮುಖ್ಯ ಶಿಕ್ಷಕ ಮಂಜುನಾಥ ಗ್ರಾಮಪುರೋಹಿತ ಹೇಳಿದರು.
ಪಟ್ಟಣದ ಡಾ. ಕೆ.ಬಿ. ಧನ್ನೂರ ಪಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸರ್ ಸಿ.ವಿ. ರಾಮನ್‌ರವರ ಬಾಲ್ಯ, ಜೀವನ, ನಡೆದು ಬಂದ ದಾರಿಯ ಬಗ್ಗೆ ವಿವರಿಸಿದ ಮಂಜುನಾಥ ಅವರು ಅವರ ಸಂಶೋಧನೆಗಳ ಪರಿಚಯ ಮಾಡಿಕೊಟ್ಟರು. ರಾಮನ್ ಪರಿಣಾಮದ ಮೂಲಕ ಅವರು ಹೇಗೆ ಜಗತ್ಪ್ರಸಿದ್ಧಿಯಾದರು ಎಂಬುದನ್ನು ವಿವರಿಸಿದರು.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಸುರೇಶ ಮಲ್ಲನಗೌಡರ ಮಾತನಾಡಿ, ನೀವು ನಿಮ್ಮಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಬಿಡುವಿನ ಸಮಯದಲ್ಲಿ ವೈಜ್ಞಾನಿಕ ಲೇಖನಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಎನ್.ಎಂ. ತಹಸೀಲ್ದಾರ, ವಿ.ಜೆ. ಜೋಗಿ, ಆರ್.ಜೆ. ನಾಗಠಾಣ, ಅಶ್ವಿನಿ ಹಡಪದ, ಕವಿತಾ, ಅಕ್ಷತಾ, ನಿರಂಜನ, ಪುಷ್ಪಾ ಹಿರೇವಡೆಯರ, ಎಂ.ವಿ. ವಾಲ್ಮೀಕಿ, ಬಿ.ಎಫ್. ನೀರಲಗಿ, ಎಂ.ಜಿ. ಮಸ್ಕಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.



