ಹರಿಯಾಣ: ಹೋಳಿ ಸಂಭ್ರಮದ ನಡುವೆ ಅಮಾನವೀಯ ಘಟನೆೊಂದು ಬೆಳಕಿಗೆ ಬಂದಿದೆ. ಹರಿಯಾಣದಲ್ಲಿ ಕೆಲವರು ಕುಡಿದ ಮತ್ತಿನಲ್ಲಿ ಗೋವಿಗೆ ಬಲವಂತವಾಗಿ ಮದ್ಯ ಕುಡಿಸಿ, ಬಳಿಕ ಅದರಿಂದ ಗಾಡಿ ಎಳೆಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಹಸುವಿನ ಬಾಯಿಯನ್ನು ಬಲವಂತವಾಗಿ ತೆರೆದು ಮದ್ಯ ಸುರಿಸುತ್ತಿರುವುದು ಕಂಡುಬರುತ್ತದೆ. ಇತರರು ಅದನ್ನು ವೀಕ್ಷಿಸುತ್ತಾ ನಗುತ್ತಿರುವ ದೃಶ್ಯವೂ ಗಮನ ಸೆಳೆಯುತ್ತಿದೆ. ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು ಹಸುವಿನಿಂದ ಬಂಡಿ ಎಳೆಯಿಸುವ ದೃಶ್ಯ ವೈರಲ್ ಆಗಿದೆ.
‘StreetdogsofBombay’ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೆಯಾಗಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ.
ಹೋಳಿ ಹಬ್ಬವು ಒಳ್ಳೆಯದರ ಜಯದ ಸಂಕೇತ. ಮಾರ್ಚ್ 2ರಂದು ಹೋಳಿಕಾ ದಹನ್ ಹಾಗೂ ಮಾರ್ಚ್ 3ರಂದು ಬಣ್ಣಗಳ ಹಬ್ಬವಾಗಿ ಆಚರಿಸಲಾಗುತ್ತಿದೆ. ಗುಜಿಯಾ, ಮಾಲ್ಪುವಾ, ಥಂಡೈ ಮುಂತಾದ ಸಾಂಪ್ರದಾಯಿಕ ಆಹಾರಗಳೊಂದಿಗೆ ಸಂಭ್ರಮಿಸುವ ಹಬ್ಬದಲ್ಲಿ ಇಂತಹ ಪ್ರಾಣಿ ಹಿಂಸಾಚಾರ ನಡೆದಿರುವುದು ಸಮಾಜದಲ್ಲಿ ಆತಂಕ ಹುಟ್ಟಿಸಿದೆ.
ಪ್ರಾಣಿ ಹಿಂಸೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿದೆ.



