ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಸಭೆ ಎದುರು ಟೆಂಟ್ನಲ್ಲಿ ನಡೆಯುತ್ತಿರುವ ‘ಬಲ್ಡೋಟ ತೊಲಗಿಸಿ’ ಹೋರಾಟ 126ನೇ ದಿನಕ್ಕೆ ತಲುಪಿದೆ. ಮುಂದಿನ ಹೋರಾಟದ ರೂಪುರೇಷೆ ಕುರಿತು ಮಾ.7ರಂದು ಬೆಳಗ್ಗೆ 10 ಗಂಟೆಗೆ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ‘ಬೆಂಗಳೂರು ಚಲೋ’ ಸಿದ್ಧತಾ ಸಭೆ ಕರೆಯಲಾಗಿದೆ ಎಂದು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆದ ಧರಣಿ ಮತ್ತು ಬಂದ್ ಹೋರಾಟ ಯಶಸ್ವಿಯಾದ ಹಿನ್ನೆಲೆ ಈ ಸಭೆ ಆಯೋಜಿಸಲಾಗಿದೆ. ಬಂದ್ ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದಿನ ಹೋರಾಟದ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಬಂದ್ ನಂತರ ಜನಪ್ರತಿನಿಧಿಗಳು ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ವಿಷಯದಲ್ಲಿ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಬಜೆಟ್ನಲ್ಲಿ ಬಾಧಿತ ಹಳ್ಳಿಗಳ ಆರೋಗ್ಯ ಸಮಸ್ಯೆ, ಪರಿಸರ ಹಾನಿ, ಬೆಳೆ ನಷ್ಟ ಹಾಗೂ ಸಾವುಗಳ ಕುರಿತು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಐಐಎಸ್ಸಿ ಮತ್ತು ಎಐಐಎಂಎಸ್ ಮೂಲಕ ಪರಿಸರ ಆರೋಗ್ಯ ಸಮೀಕ್ಷೆ ನಡೆಸಬೇಕು. ತುಂಗಭದ್ರಾ ನದಿ ಮಾಲಿನ್ಯ ನಿಯಂತ್ರಣಕ್ಕಾಗಿ ಶುದ್ಧೀಕರಣ ಯೋಜನೆ ರೂಪಿಸಿ ಅನುದಾನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಎ.ಎಂ. ಮದರಿ, ಮಂಜುನಾಥ ಜಿ. ಗೊಂಡಬಾಳ, ಶರಣು ಡೊಳ್ಳಿನ, ಸರೋಜಾ ಬಾಕಳೆ, ಮೂಕಪ್ಪ ಮೇಸ್ತಿ, ಶರಣು ಗಡ್ಡಿ, ರುದ್ರಪ್ಪ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



