ನವದೆಹಲಿ: ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಇತ್ತೀಚೆಗೆ ಭಾರತಕ್ಕೆ ರಷ್ಯಾ ತೈಲ ಖರೀದಿಸಲು 30 ದಿನಗಳ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದರು. ಇದರಿಂದ ರಾಜಕೀಯ ಚರ್ಚೆ ತೀವ್ರಗೊಂಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಮಲ್ ಹಾಸನ್, “ಭಾರತವು ಸ್ವತಂತ್ರ ರಾಷ್ಟ್ರ. ಇತರ ದೇಶಗಳ ಅನುಮತಿಯ ಮೇಲೆ ನಾವು ಅವಲಂಬಿತರಾಗಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರ ನಡುವೆಯೇ ಇರಾನ್–ಅಮೆರಿಕ–ಇಸ್ರೇಲ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ತೈಲ ಪೂರೈಕೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲೂ ಭಾರತ ಕಡಿಮೆ ಬೆಲೆಗೆ ದೊರೆಯುವ ಯಾವುದೇ ಮೂಲದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.



