ಚಿತ್ರದುರ್ಗ: ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಉಪಾಧ್ಯ ಹೋಟೆಲ್ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಬಡಾವಣೆ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಶಿವಮೊಗ್ಗದಿಂದ ಚಿತ್ರದುರ್ಗ ಮೂಲಕ ತುಮಕೂರು ಕಡೆಗೆ ಹೊರಟಿದ್ದ ಲಾರಿಯನ್ನು ಸ್ಥಳೀಯರು ಅನುಮಾನದ ಆಧಾರದ ಮೇಲೆ ತಡೆದಿದ್ದಾರೆ. ಉಪಾಧ್ಯ ಹೋಟೆಲ್ ಬಳಿ ಲಾರಿಯನ್ನು ನಿಲ್ಲಿಸಲು ಯತ್ನಿಸುವ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡು ಹೋಟೆಲ್ ಬೋರ್ಡ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಈ ವೇಳೆ ಲಾರಿಯಿಂದ ಪಡಿತರ ಅಕ್ಕಿ ಚೀಲಗಳು ಕೆಳಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಹೋಟೆಲ್ ಮಾಲೀಕರು ಲಾರಿಯನ್ನು ತಡೆಯಲು ಮುಂದಾಗಿದ್ದಾರೆ. ಘಟನೆ ಬಳಿಕ ಲಾರಿಯನ್ನು ತೆಗೆದುಕೊಂಡು ಹೋಗಲು ಚಾಲಕ ಪ್ರಯತ್ನಿಸಿದರೂ, ಸ್ಥಳೀಯ ನಿವಾಸಿಗಳು ಕಾರನ್ನು ಅಡ್ಡಗಟ್ಟಿ ಲಾರಿಯನ್ನು ತಡೆದಿದ್ದಾರೆ.
ತಕ್ಷಣವೇ ಚಿತ್ರದುರ್ಗದ ಬಡಾವಣೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಲಾರಿಯನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ಚಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



