ಬೆಂಗಳೂರು: ಹಿಂದೂಗಳ ಹೊಸ ವರ್ಷ ಯುಗಾದಿ. ಹಬ್ಬವನ್ನು ರಾಜ್ಯದ ಜನತೆಗೆ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರಗಳೊಂದಿಗೆ ಬರಮಾಡಿಕೊಂಡಿದ್ದಾರೆ. ಹಬ್ಬದ ದಿನ ಬೇವು-ಬೆಲ್ಲದ ಸಿಹಿ ಮತ್ತು ಕಹಿ ಸವಿದ ಜನ, ಮಾರನೇ ದಿನ ಖಾರದ ಊಟ ಮಾಡುತ್ತಾರೆ. ‘ಹೊಸತೊಡಕು’ ಮಾಂಸಾಹಾರ ಪ್ರಿಯರಿಗೆ ಸುಗ್ಗಿಯಿದ್ದಂತೆ.
ಹೌದು ಇಂದು, ಹೊಸತೊಡಕು ಆಚರಣೆಗೆ ಜನರು ಭರ್ಜರಿ ಮಾಂಸ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ದೇವನಹಳ್ಳಿ, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ ಮಾಂಸದಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಹೊಸತೊಡಕಿನ ಹಿನ್ನೆಲೆಯಲ್ಲಿ, ಮಟನ್ ಬೆಲೆ ಒಂದು ಕೆಜಿಗೆ 1000 ರೂ.ನಿಂದ 1500 ರೂ. ವರೆಗೆ ಏರಿಕೆ ಕಂಡಿದೆ.
ಬೆಲೆ ಎಷ್ಟೇ ಹೆಚ್ಚಿದ್ದರೂ, ಜನರು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಪೂರೈಸಲು ಉತ್ಸಾಹದಿಂದ ಮಾಂಸ ಖರೀದಿಸುತ್ತಿದ್ದಾರೆ. ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್, ದೇವನಹಳ್ಳಿಯ ಎಲಿಯೂರು ಮತ್ತು ಮೈಸೂರಿನ ಕನ್ನೇಗೌಡನ ಕೊಪ್ಪಲ್ ಸೇರಿದಂತೆ ಪ್ರಮುಖ ಮಾಂಸದ ಮಳಿಗೆಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಪ್ರತಿ ವರ್ಷದಂತೆ, ಈ ವರ್ಷವೂ ಕೂಡ ಹೊಸತೊಡಕಿಗೆ ಮಾಂಸದ ಬೇಡಿಕೆ ಹೆಚ್ಚಿದ್ದು, ಜನರು ಸಂಭ್ರಮದಿಂದ ಖರೀದಿಯಲ್ಲಿ ನಿರತರಾಗಿದ್ದಾರೆ.



