ಶಿವಮೊಗ್ಗ: ನಗರದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಎಂದು ಗುರುತಿಸಲಾಗಿದೆ. ಅವರು ಸಫಾರಿಯಲ್ಲಿ ಪಶುವೈದ್ಯಾಧಿಕಾರಿಯಾಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದರು.
ಗುರುವಾರ ರಾತ್ರಿ ಸುಮಾರು 10:30ರ ವೇಳೆಗೆ ಮೃಗಾಲಯದ ಆಸ್ಪತ್ರೆಗೆ ತೆರಳಿ ಹಕ್ಕಿಯ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದರು. ಬಳಿಕ ರಾತ್ರಿ 11:45ರ ಸುಮಾರಿಗೆ ಗರ್ಭಿಣಿ ನೀರಾನೆಯ ಆರೋಗ್ಯ ಪರಿಶೀಲನೆಗಾಗಿ ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಆವರಣದೊಳಗೆ ಪ್ರವೇಶಿಸಿದ್ದರು.
ಈ ವೇಳೆ ನೀರಾನೆ ಹಠಾತ್ತಾಗಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಸಮೀಕ್ಷಾ ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಅವರು ನಿಧನರಾಗಿದ್ದಾರೆ.
ಈ ಘಟನೆಗೆ ಸಂತಾಪ ಸೂಚಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, “ಪ್ರತಿ ಜೀವವೂ ಅಮೂಲ್ಯ. ಸರ್ಕಾರ ಮೃತ ವೈದ್ಯರ ಕುಟುಂಬದ ಜೊತೆ ನಿಲ್ಲಲಿದೆ” ಎಂದು ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಸುರಕ್ಷತಾ ಲೋಪಗಳಿವೆವೇ ಎಂಬುದರ ಕುರಿತು ಪರಿಶೀಲಿಸಿ 7 ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.



