ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚುತ್ತಿದೆ. ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದ್ದು, ಪುಟ್ಟ ಮಕ್ಕಳು ಮತ್ತು ವೃದ್ಧರಿಗೂ ಅಪಾಯ ಉಂಟಾಗುವ ಭಯ ಇದೆ.
ಇಂತಹ ಸಂದರ್ಭದಲ್ಲೇ ಜೆಪಿ ನಗರ ಎಲಿಟಾ ಪ್ರೊಮೆನೇಡ್ ಅಪಾರ್ಟ್ಮೆಂಟ್ ನಿವಾಸಿಗಳು ಬೀದಿ ನಾಯಿಗಳಿಗೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರು ಕಾಲಭೈರವ ಮತ್ತು ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳಿಗೆ ಶಾಂತಿ ದೊರಕಲಿ ಮತ್ತು ಮಾನವರೊಂದಿಗೆ ಸ್ನೇಹಭಾವ ಬೆಳೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಅಪಾರ್ಟ್ಮೆಂಟ್ ಕ್ಲಬ್ ಹೌಸ್ನಲ್ಲಿ ನಡೆದ ಈ ಪೂಜೆಯಲ್ಲಿ ವಾಸಿಗಳು, ಮಕ್ಕಳು ಮತ್ತು ಸಾಕು ನಾಯಿಗಳು ಭಾಗವಹಿಸಿದ್ದರು. ಪೂಜೆಯ ನಂತರ ವಿಶೇಷ ಪ್ರಸಾದ ಹಾಗೂ ಆಹಾರ ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮದ ವೇಳೆ ಕೆಲ ನಿವಾಸಿಗಳು ಬೀದಿ ನಾಯಿಗಳಿಂದ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ನಗರದ ಅನೇಕ ಅಪಾರ್ಟ್ಮೆಂಟ್ಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಿರುವುದು ಗಮನಾರ್ಹವಾಗಿದ್ದು, ಕೆಲವೆಡೆ ಮಕ್ಕಳಿಗೆ ಹಾಗೂ ನಿವಾಸಿಗಳಿಗೆ ಕಚ್ಚುವ ಘಟನೆಗಳೂ ವರದಿಯಾಗಿವೆ. ಇಂತಹ ಸಂದರ್ಭದಲ್ಲಿ ಪೂಜೆ ಮತ್ತು ಪ್ರಾರ್ಥನೆಯ ಮೂಲಕ ಮಾನವ-ನಾಯಿ ನಡುವಿನ ಸ್ನೇಹವನ್ನು ಹೆಚ್ಚಿಸಲು ನಿವಾಸಿಗಳು ಮುಂದಾಗಿರುವುದು ವಿಶೇಷವಾಗಿದೆ.
ಒಟ್ಟಿನಲ್ಲಿ, ಬೀದಿ ನಾಯಿಗಳು ಮತ್ತು ಜನರ ನಡುವೆ ಪರಸ್ಪರ ಪ್ರೀತಿ, ನಂಬಿಕೆ ಮತ್ತು ಸಹಕಾರ ಬೆಳೆಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮ ಜನರ ಗಮನಸೆಳೆದಿದೆ.



