ಬೆಂಗಳೂರು: ಹೈಕಮಾಂಡ್ ತೀರ್ಮಾನ ಮಾಡುವವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪುನರುಚ್ಚರಿಸಿದರು.
ಬಜೆಟ್‌ಗೆ ಉತ್ತರಿಸುವ ವೇಳೆ ಸದನದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಹಾಗೂ ಸ್ಪೀಕರ್ ಯು.ಟಿ. ಖಾದರ್ ಸಂಬಂಧಿತ ವಿಚಾರಗಳನ್ನು ಪ್ರಸ್ತಾಪಿಸಿ ವಿಪಕ್ಷ ಸದಸ್ಯರು ಸಿಎಂಗೆ ಕಾಲೆಳೆಯಲು ಯತ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಮ್ಮಲ್ಲಿ ಎಲ್ಲ ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ. ಯಾರಾದರೂ ಸಿಎಂ ಆದರೂ ನನಗೆ ಸಂತೋಷವೇ” ಎಂದು ಹೇಳಿದರು.
“ಹೈಕಮಾಂಡ್ ಎಲ್ಲಿಯವರೆಗೆ ಇರಬೇಕು ಎಂದು ತೀರ್ಮಾನಿಸುತ್ತದೆಯೋ, ಅಲ್ಲಿವರೆಗೆ ನಾನು ಸಿಎಂ ಆಗಿರುತ್ತೇನೆ. ಅದೇ ರೀತಿಯಾಗಿ ಖಾದರ್ ಸ್ಪೀಕರ್ ಆಗಿ ಮುಂದುವರಿಯುತ್ತಾರೆ. ವಿಪಕ್ಷಗಳು ಏನೇ ಮಾಡಿದರೂ ಅವರು ಮಣಿಯುವವರಲ್ಲ,” ಎಂದು ಹೇಳಿದರು.
ವಿಪಕ್ಷ ನಾಯಕರ ಮೇಲೆ ವ್ಯಂಗ್ಯವಾಡಿದ ಸಿಎಂ, “ಎಲ್ಲರಿಗೂ ಕನಸುಗಳಿರುತ್ತವೆ. ಆರ್. ಅಶೋಕ್‌ಗೂ ಸಿಎಂ ಆಗುವ ಕನಸು ಇದೆ. ಆದರೆ ಅದಕ್ಕೆ ವಿಜಯೇಂದ್ರ ಅವಕಾಶ ಕೊಡಲಾರರು. ಅಶೋಕ್ ಸಿಎಂ ಆದರೂ ಸಂತೋಷ, ಬೆಲ್ಲದ್ ಆದರೂ ಸಂತೋಷ,” ಎಂದು ಹೇಳಿದರು.
ಈ ವೇಳೆ ಸದಸ್ಯ ಸುನೀಲ್ ಕುಮಾರ್, “ಡಿ.ಕೆ. ಶಿವಕುಮಾರ್ ಸಿಎಂ ಆದರೂ ಖುಷಿ ಅಂತ ಹೇಳಿ ಸರ್, ನೋಡೋಣ,” ಎಂದು ಸವಾಲು ಹಾಕಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, “ನೋಡಪ್ಪ, ಹೈಕಮಾಂಡ್ ತೀರ್ಮಾನ ಮಾಡುವವರೆಗೆ ನಾನೇ ಸಿಎಂ. ನಮ್ಮಲ್ಲಿ ಯಾರೇ ಸಿಎಂ ಆದರೂ ಸಂತೋಷವೇ” ಎಂದು ಸ್ಪಷ್ಟಪಡಿಸಿದರು.



