ಬೆಂಗಳೂರು: ಮೊದಲ ಹೆಂಡ್ತಿಗೆ ವಿಚ್ಚೇದನ ಕೊಡದೇ ಎರಡನೇ ಮದುವೆಗೆ ಮುಂದಾಗಿದ್ದ ಪತಿಗೆ ಮಂಟಪದಲ್ಲೇ ಪತ್ನಿ ಶಾಕ್ ಕೊಟ್ಟಿರುವ ಘಟನೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇಗುಲ ಬಳಿ ಜರುಗಿದೆ.
ಎಸ್, ಸುರೇಶ್ ಎಂಬಾತನೇ ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಗೆ ಸಿದ್ದವಾಗಿದ್ದ ವರ. ಈತ ವಿಚ್ಚೇದನ ನೀಡದೆ ಮತ್ತೊಂದು ವಿವಾಹವಾಗುತ್ತಿರುವ ವಿಚಾರ ತಿಳಿದು ಮೊದಲ ಪತ್ನಿ ಪೊಲೀಸರ ಜೊತೆಯಲ್ಲೇ ಆಗಮಿಸಿ ಮದುವೆ ನಿಲ್ಲಿಸಿದ್ದಾಳೆ. ಚಿಕ್ಕಬಳ್ಳಾಪುರ ಮಂಚೇನಹಳ್ಳಿ ಗ್ರಾಮದ ನಾಗಮಣಿ ಎಂಬಾಕೆಯನ್ನ 19 ವರ್ಷಗಳ ಹಿಂದೆಯೇ ಆಂಧ್ರ ಮೂಲದ ಕದರಿ ಎಂಬ ಗ್ರಾಮಕ್ಕೆ ಸೇರಿದ್ದ ಸುರೇಶ್ ಮದುವೆಯಾಗಿದ್ದ. ಈ ದಂಪತಿ ಇಬ್ಬರು ಮಕ್ಕಳು ಕೂಡ ಇದ್ದಾರಂತೆ.
ಮದುವೆಯಾಗಿ ಹತ್ತಾರು ವರ್ಷ ಸಂಸಾರ ಮಾಡಿದ ಸುರೇಶ್ ಮೊದಲ ಪತ್ನಿಯನ್ನ ಬಿಟ್ಟು 2ನೇ ಮದುವೆಯಾಗಲು ಮುಂದಾಗಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇಗುಲದ ಬಳಿ ಸುರೇಶ್ ಎಂಬಾತನ ಮದುವೆ ನಿಶ್ಚಯವಾಗಿತ್ತು. ಇನ್ನೇನು ತಾಳಿ ಕಟ್ಟೋ ಸಮಯಕ್ಕೆ ಸರಿಯಾಗಿ ಬಂದ ನಾಗಮಣಿ ಮದುವೆ ನಿಲ್ಲಿಸಿದ್ದಾರೆ. ಇನ್ನೂ ಪೊಲೀಸರ ಸಮೇತ ಮೊದಲ ಪತ್ನಿ ಎಂಟ್ರಿಕೊಡುತ್ತಿದ್ದಂತೆಯೇ ಗಂಡ ಕಕ್ಕಾಬಿಕ್ಕಿಯಾಗಿದ್ದಾರೆ.
ಮೊದಲನೆ ಪತ್ನಿಗೆ ವಿಚ್ಚೇಧನ ನೀಡದೆ ಎರಡನೆ ಮದುವೆಯಾಗುವುದು ತಪ್ಪು ಎಂದು ಪೊಲೀಸರು ಬುದ್ದಿವಾದ ಹೇಳಿದ್ದು ಮದುವೆಯನ್ನ ನಿಲ್ಲಿಸಿದ್ದಾರೆ. ಸಿಂಗಾರಗೊಂಡು ಮದುವೆಗೆ ಸಿದ್ದವಾಗಿ ಕುಳಿತಿದ್ದ ಸುರೇಶ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.



