ಬೆಂಗಳೂರು: ನಗರದಲ್ಲಿ ಟೋಯಿಂಗ್ ವ್ಯವಸ್ಥೆಯನ್ನು ಪುನರಾರಂಭಿಸಲು ಸರ್ಕಾರ ಮುಂದಾಗಿರುವ ಬಗ್ಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 2022ರಲ್ಲಿ ಟೋಯಿಂಗ್ ವ್ಯವಸ್ಥೆ ವೇಳೆ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದರು ಎಂದು ಅವರು ಹೇಳಿದರು. ಟೋಯಿಂಗ್ ಮಾಫಿಯಾ ಅಮಾನುಷವಾಗಿ ವರ್ತಿಸುತ್ತಿತ್ತು ಎಂದು ಆರೋಪಿಸಿದರು.
ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಟೋಯಿಂಗ್ ವ್ಯವಸ್ಥೆ ವಿರುದ್ಧ ಸಾಕಷ್ಟು ಒತ್ತಡವಿತ್ತು. ಕೆಲವು ಪೊಲೀಸ್ ಅಧಿಕಾರಿಗಳೇ ಅಪ್ರತ್ಯಕ್ಷವಾಗಿ ಟೋಯಿಂಗ್ ಟೆಂಡರ್ ಪಡೆದಿದ್ದರು ಎಂಬ ಆರೋಪಗಳಿದ್ದವು. ಸಿಬ್ಬಂದಿಯ ವರ್ತನೆ ಸೇರಿದಂತೆ ಅನೇಕ ಅಂಶಗಳನ್ನು ಪರಿಗಣಿಸಿ ಆ ವ್ಯವಸ್ಥೆಯನ್ನು ರದ್ದು ಮಾಡಲಾಗಿತ್ತು ಎಂದು ತಿಳಿಸಿದರು.
ಇದೀಗ ಮತ್ತೆ ಟೋಯಿಂಗ್ ವ್ಯವಸ್ಥೆ ತರಲು ಸರ್ಕಾರ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. ಹಿಂದಿನಂತೆ ಕಂಟ್ರಾಕ್ಟರ್‌ಗಳು ಪೊಲೀಸ್ ಠಾಣೆಗಳಿಗೆ ಹಣ ನೀಡಬೇಕಾಗಿತ್ತು ಎಂಬ ವರದಿಗಳು ಇದ್ದವು. ಲಕ್ಷಾಂತರ ರೂಪಾಯಿ ವಹಿವಾಟು ನಡೆದಿತ್ತು ಎಂದು ಹೇಳಿದರು. ಈಗ ಮತ್ತೆ ಆ ರೀತಿಯ ಮಾಫಿಯಾ ಕೈಗೆ ಬೆಂಗಳೂರು ಜನರನ್ನು ಒಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.
ದಂಡ ವಸೂಲಿ ಹೆಸರಿನಲ್ಲಿ 112 ವಾಹನಗಳು ರಸ್ತೆಯಲ್ಲಿ ದರೋಡೆ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಟೀಕಿಸಿದ ಅವರು, ಸರ್ಕಾರ ತನ್ನ ಆರ್ಥಿಕ ದುಸ್ಥಿತಿಯನ್ನು ಸರಿಪಡಿಸಲು ದಂಡವನ್ನು ಆದಾಯ ಮೂಲವಾಗಿ ಬಳಸುತ್ತಿದೆ ಎಂದು ಹೇಳಿದರು.
ಇದು ನಾಗರಿಕರಿಗೆ ಅನಗತ್ಯ ಕಿರಿಕಿರಿ ಉಂಟುಮಾಡುತ್ತಿದೆ. ಸರ್ಕಾರವು ತನ್ನ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ಬೇರೆ ಮಾರ್ಗಗಳನ್ನು ಹುಡುಕಬೇಕು. ಜನರಿಗೆ ಹಿಂಸೆ ಮತ್ತು ಅವಮಾನ ಉಂಟುಮಾಡುವ ನೀತಿಗಳನ್ನು ಅನುಸರಿಸಬಾರದು ಎಂದು ಅವರು ಒತ್ತಾಯಿಸಿದರು. ಈ ರೀತಿಯ ಕ್ರಮವನ್ನು ತಾವು ಖಂಡಿಸುತ್ತೇನೆ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.



