ಬೆಂಗಳೂರು: ಕಳೆದ 12 ವರ್ಷಗಳಿಂದ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ನೈಜೀರಿಯಾ ಮೂಲದ ಇಮ್ಯಾನ್ಯುಯಲ್ ಎಂಬಾತನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಇಮ್ಯಾನ್ಯುಯಲ್, ಬಳಿಕ ಬೆಂಗಳೂರಿನಲ್ಲಿ ನೆಲೆಸಿ ಸ್ಥಳೀಯ ಮಹಿಳೆಯನ್ನು ಮದುವೆಯಾಗಿದ್ದನು. ನಗರದಲ್ಲೇ 4-5 ಮನೆಗಳನ್ನು ಬಾಡಿಗೆಗೆ ಪಡೆದು ಡ್ರಗ್ಸ್ ಜಾಲವನ್ನು ನಡೆಸುತ್ತಿದ್ದನೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈತ ಹೊರ ರಾಜ್ಯ ಹಾಗೂ ವಿದೇಶಗಳಿಂದ ಸಬ್ ಪೆಡ್ಲರ್‌ಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದನು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಹೆಬ್ಬಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ ಎಂಡಿಎಮ್‌ಎ (MDMA), ಎಲ್‌ಎಸ್‌ಡಿ (LSD) ಸೇರಿದಂತೆ ವಿವಿಧ ಸಿಂಥೆಟಿಕ್ ಡ್ರಗ್ಸ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜಪ್ತಿಯಾದ ಮಾದಕ ವಸ್ತುಗಳ ಮೌಲ್ಯ ಸುಮಾರು ₹14 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



