ವಿಜಯಪುರ: ಸಿನಿಮೀಯ ಶೈಲಿಯಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರನ್ನು ಶೂಟೌಟ್ ಮಾಡಿರುವ ಘಟನೆ ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಜರುಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಜೊತೆಗೆ ಕೃಷಿಕನಾಗಿದ್ದ ರಾಜು ಕಡೆ ಮೃತ ವ್ಯಕ್ತಿ. ಇವರು ಥಾರ್ ಕಾರ್ ತಗೆದುಕೊಂಡು ವಿಜಯಪುರದತ್ತ ಬರುತ್ತಿರುವಾಗ ಹಂತಕರು ಟಿಪ್ಪರ್ನಿಂದ ಮುಖಾಮುಖಿ ಗುದ್ದಿದ್ದಾರೆ. ನಂತರ ಕಾರಿನ ಡೋರ್ ಓಪನ್ ಆಗದೇ ಇರೋದಕ್ಕೆ ಕಲ್ಲುಗಳನ್ನ ಎತ್ತಿ ಹಾಕಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಹಂತಕರು ಕಾರಿನ ಮೇಲೆ ಗುಂಡಿನ ಸುರಿಮಳೆ ನಡೆಸಿದ್ದಾರೆ. ಈ ಹತ್ಯೆಗೆ ಬಹಳ ದಿನಗಳಿಂದ ಸ್ಕೆಚ್ ಹಾಕಲಾಗಿದ್ದು, ರಾಜು ದಿನನಿತ್ಯದ ಚಲನವಲನಗಳ ಮೇಲೆ ಹಂತಕರು ನಿಗಾ ಇಟ್ಟಿದ್ದರು. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜು ಏಕಾಂಗಿಯಾಗಿ ಬರೋದನ್ನ ಅರಿತು ದಾಳಿ ಮಾಡಲಾಗಿದೆ. ಇನ್ನು ಈ ಕೃತ್ಯಕ್ಕೆ ಆಸ್ತಿಯ ವೈಷಮ್ಯವೇ ಕಾರಣ ಎನ್ನಲಾಗಿದೆ.
ಅಷ್ಟೇ ಅಲ್ಲ ಈ ಹಿಂದೆ ಕೂಡ ಆಸ್ತಿಗಾಗಿ ಗಲಾಟೆ ನಡೆದಿತ್ತು. ಹತ್ಯೆಯ ಆರೋಪಿಗಳನ್ನ ಈ ಕೂಡಲೇ ಬಂಧಿಸಬೇಕು ಅಂತಾ ಮೃತ ರಾಜು ಪತ್ನಿ ಇಟಾಬಾಯಿ ಆಗ್ರಹಿಸಿದ್ದಾರೆ. ವಿಜಯಪುರ ಗ್ರಾಮೀಣ ಹಾಗೂ ಎಪಿಎಂಸಿ ಠಾಣೆಯ ಪೊಲೀಸರು ಸದ್ಯ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪರಿಶೀಲನೆ ನಡೆಸಿದ್ದಾರೆ. ಹಂತಕರ ಸೆರೆಗೆ ಕೂಡ ಪೊಲೀಸರು ಜಾಲ ಬೀಸಿದ್ದಾರೆ.



