ಮುಂಬೈ: ಐಪಿಎಲ್ 2026ರ 24ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳಿಂದ ಜಯ ದಾಖಲಿಸಿದೆ.
ಈ ಗೆಲುವಿನೊಂದಿಗೆ ಪಂಜಾಬ್ ಲೀಗ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭದಲ್ಲೇ ಮುಂಬೈಗೆ ಆಘಾತ ಎದುರಾಯಿತು. ರಿಕಲ್ಟನ್ ಕೇವಲ 2 ರನ್‌ಗೆ ಔಟಾದರೆ, ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್‌ಗೆ ವಿಕೆಟ್ ಒಪ್ಪಿಸಿದರು. ಅರ್ಶ್‌ದೀಪ್ ಸಿಂಗ್ ಈ ಎರಡೂ ಪ್ರಮುಖ ವಿಕೆಟ್‌ಗಳನ್ನು ಪಡೆದರು.
ನಂತರ ಕ್ವಿಂಟನ್ ಡಿ ಕಾಕ್ ಹಾಗೂ ನಮನ್ ಧೀರ್ ಉತ್ತಮ ಜೊತೆಯಾಟ ಕಟ್ಟಿದರು. ನಮನ್ ಧೀರ್ 31 ಎಸೆತಗಳಲ್ಲಿ 50 ರನ್ ಗಳಿಸಿದರೆ, ಕ್ವಿಂಟನ್ ಡಿ ಕಾಕ್ ಸ್ಫೋಟಕ ಶತಕ ಸಿಡಿಸಿದರು. ಅವರು 60 ಎಸೆತಗಳಲ್ಲಿ 112 ರನ್‌ಗಳ ಅಮೋಘ ಇನಿಂಗ್ಸ್ ಆಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕ ವಿಫಲವಾದ ಕಾರಣ ಮುಂಬೈ 20 ಓವರ್‌ಗಳಲ್ಲಿ 195 ರನ್‌ಗಳಿಗೆ ಸೀಮಿತವಾಯಿತು.
196 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ಗೆ ಪ್ರಾರಂಭಿಕ ಜೋಡಿ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಆರ್ಯ 15 ರನ್‌ಗೆ ಔಟಾದರೂ, ಪ್ರಭ್ಸಿಮ್ರಾನ್ ಸಿಂಗ್ ಅಜೇಯ 80 ರನ್‌ಗಳ ಭರ್ಜರಿ ಆಟವಾಡಿದರು. ನಾಯಕ ಶ್ರೇಯಸ್ ಅಯ್ಯರ್ ಜೊತೆಗೂಡಿ 66 ರನ್‌ಗಳ ಮಹತ್ವದ ಜೊತೆಯಾಟ ಕಟ್ಟಿದರು.
ಪಂಜಾಬ್ ತಂಡ 21 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಗೆಲುವು ದಾಖಲಿಸಿತು. ಇತ್ತ ಮುಂಬೈ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ಪರಿಣಾಮಕಾರಿತ್ವ ಕಳೆದುಕೊಂಡಿತು. ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯಲು ವಿಫಲರಾದರು.
ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಆಡಿದ 5 ಪಂದ್ಯಗಳಲ್ಲಿ 4 ಸೋಲುಗಳೊಂದಿಗೆ 9ನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ಕಿಂಗ್ಸ್ ತನ್ನ ಅಜೇಯ ಓಟ ಮುಂದುವರೆಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.



