ಶಿವಮೊಗ್ಗ: ಹಾವು ಕಚ್ಚಿದ ಪರಿಣಾಮ ಎರಡು ವರ್ಷದ ಮಗು ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.
ಸಾಗರದ ಎಸ್.ಎಸ್ ನಗರ ನಿವಾಸಿಗಳಾದ ಅಕ್ಷತಾ ಹಾಗೂ ಗಣೇಶ್ ದಂಪತಿ ಪುತ್ರ ಭವಿನ್ (2) ಮೃತಪಟ್ಟ ಮಗು. ಅಕ್ಷತಾ ತಮ್ಮ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದ ವೇಳೆ ಘಟನೆ ನಡೆದಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಗುವಿಗೆ ಹಾವು ಕಚ್ಚಿದ್ದು, ಮಗು ಅಳುವುದನ್ನು ಗಮನಿಸಿದ ಕುಟುಂಬಸ್ಥರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಘಟನೆಗೆ ಸಂಬಂಧಿಸಿ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



