ಚಾಮರಾಜನಗರ: ಕೊರೊನಾ ಅವಧಿಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೊನೆಗೂ ಸರ್ಕಾರದ ವತಿಯಿಂದ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸಂತ್ರಸ್ತ ಕುಟುಂಬಗಳ ದೀರ್ಘಕಾಲದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಸಾವನ್ನಪ್ಪಿದ್ದ ದಾರುಣ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗಿನಿಂದಲೂ ನಿರಂತರ ಹೋರಾಟ ನಡೆಯುತ್ತಿತ್ತು.
ಈಗ ಸರ್ಕಾರ 21 ಮಂದಿಗೆ ಸರ್ಕಾರಿ ಕೆಲಸ ನೀಡಲು ನಿರ್ಧರಿಸಿದೆ. ಈ ಸಂಬಂಧ ಮಂಗಳವಾರ (ಏಪ್ರಿಲ್ 21) ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಸಂತ್ರಸ್ತ ಕುಟುಂಬಗಳಲ್ಲಿ ಸಂತಸದ ವಾತಾವರಣ ಉಂಟಾಗಿದೆ. ಸರ್ಕಾರಿ ಉದ್ಯೋಗ ಸಿಗುತ್ತಿರುವ ಬಗ್ಗೆ ದೊಡ್ಡಯ್ಯ ಕುಟುಂಬ ಸಂತಸ ವ್ಯಕ್ತಪಡಿಸಿದ್ದು, “ಗಂಡನನ್ನು ಕಳೆದುಕೊಂಡ ಬಳಿಕ ಜೀವನ ನಡೆಸುವುದು ಕಷ್ಟವಾಗಿತ್ತು, ಮಗನ ಶಿಕ್ಷಣಕ್ಕೂ ತೊಂದರೆ ಎದುರಾಯಿತು” ಎಂದು ಕಣ್ಣೀರಿನಿಂದ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಈ ಮೂಲಕ ಚಾಮರಾಜನಗರ ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳ ಹಲವು ವರ್ಷದ ಬೇಡಿಕೆಗೆ ಅಂತಿಮವಾಗಿ ಸ್ಪಂದನೆ ದೊರಕಿದೆ.



