ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟನೆ ಮಾಡಬೇಕಿದ್ದ ರಾಜಸ್ಥಾನದ ರಿಫೈನರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಹಾನಿ ಸಂಭವಿಸಿದೆ.
79,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಅತ್ಯಾಧುನಿಕ ರಿಫೈನರಿ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಭಾಗವಹಿಸಲು ನಿರ್ಧರಿಸಲಾಗಿತ್ತು. ಆದರೆ ಅಗ್ನಿ ಅವಘಡದಿಂದ ಕಾರ್ಯಕ್ರಮ ಮುಂದೂಡುವ ಸಾಧ್ಯತೆ ಇದೆ.
ರಾಜಸ್ಥಾನದ ಬಲೋತ್ರದಲ್ಲಿರುವ ಪಚಪದ್ರಾ ರಿಫೈನರಿ ಘಟಕವು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾಗಿದೆ. ಈ ಘಟಕವು ಮುದ್ರಾ ಬಂದರಿನೊಂದಿಗೆ ನೇರ ಸಂಪರ್ಕ ಹೊಂದಿರುವುದರಿಂದ ಸಾಗಣೆ ಮತ್ತು ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇತ್ತು.
ಘಟಕದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸುಮಾರು 20 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಈವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಈ ರಿಫೈನರಿ ಘಟಕವು ಭಾರತದ ಮೊದಲ ಗ್ರೀನ್‌ಫೀಲ್ಡ್ ರಿಫೈನರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ವರ್ಷಕ್ಕೆ ಸುಮಾರು 5,000 ಕೋಟಿ ರೂ. ಆದಾಯ ರಾಜ್ಯ ಸರ್ಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.



