ಹಾವೇರಿ: ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕುಟುಂಬವೊಂದು ರಾತ್ರೋರಾತ್ರಿ ಸಂಭವಿಸಿದ ಘಟನೆದಿಂದ ಆಘಾತಕ್ಕೆ ಒಳಗಾಗಿದೆ. ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ನಾಪತ್ತೆಯಾಗಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಗ್ರಾಮದ ನಿವಾಸಿ ಶಂಕ್ರಮ್ಮ ಅವರ ನಿಶ್ಚಿತಾರ್ಥ ಇಂದು (ಏಪ್ರಿಲ್ 26) ನಿಗದಿಯಾಗಿದ್ದು, ಕುಟುಂಬಸ್ಥರು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ಜೊತೆಗೆ ಮೇ 11ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ಹಿಂದಿನ ರಾತ್ರಿ ಯುವತಿ ನಾಪತ್ತೆಯಾಗಿರುವುದು ಕುಟುಂಬಕ್ಕೆ ಭಾರೀ ಆಘಾತ ತಂದಿದೆ.
ಪೋಷಕರ ಆರೋಪದ ಪ್ರಕಾರ, ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಯುವಕ ಯುವತಿಯನ್ನು ಪ್ರೇರೇಪಿಸಿ ಕರೆದೊಯ್ದಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಹಿಂದೂಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು “ವ್ಯವಸ್ಥಿತ ಲವ್ ಜಿಹಾದ್” ಎಂದು ಆರೋಪಿಸಿದ್ದಾರೆ. ಯುವತಿಯನ್ನು ಶೀಘ್ರ ಪತ್ತೆಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿ ಹಾಗೂ ಆರೋಪಿಯ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.



