ಬೆಂಗಳೂರು: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೊಹಮ್ಮದ್ ಶಾರಿಕ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ನ್ಯಾಯಾಲಯವು ಸೆಕ್ಷನ್ 121A, 122, 326 ಹಾಗೂ ಯುಎಪಿಎ ಸೇರಿದಂತೆ ಹಲವು ಗಂಭೀರ ವಿಧಿಗಳ ಅಡಿಯಲ್ಲಿ ದೋಷಿ ಎಂದು ತೀರ್ಮಾನಿಸಿ, 10 ವರ್ಷ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಶಿಕ್ಷೆ ಘೋಷಣೆಯ ವೇಳೆ ಶಾರಿಕ್ ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದು, “ನನಗೆ ಒಬ್ಬ ಮಗಳಿದ್ದಾಳೆ, ಕುಟುಂಬದ ಏಕೈಕ ದುಡಿಯುವವನು ನಾನು” ಎಂದು ಹೇಳಿ ಶಿಕ್ಷೆ ಕಡಿಮೆ ಮಾಡುವಂತೆ ವಿನಂತಿಸಿದ್ದಾನೆ. ಜೊತೆಗೆ, ಆರೋಗ್ಯ ಸಮಸ್ಯೆ ಮತ್ತು ಕುಟುಂಬ ಭೇಟಿಗೆ ಅವಕಾಶ ಇಲ್ಲದಿರುವ ಕಾರಣವನ್ನು ಉಲ್ಲೇಖಿಸಿ ತನ್ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡುವಂತೆ ಸಹ ಮನವಿ ಮಾಡಿದ್ದಾನೆ.
ಆದರೆ, ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ಬೆಂಗಳೂರಿನ ಜೈಲಿನಲ್ಲಿ ಅಗತ್ಯ ಆರೋಗ್ಯ ಸೌಲಭ್ಯಗಳಿದ್ದು, ಶಿವಮೊಗ್ಗಕ್ಕಿಂತ ಉತ್ತಮ ವ್ಯವಸ್ಥೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೂರು ತಿಂಗಳ ಹಿಂದೆ ಶಾರಿಕ್ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ವೇಗವಾಗಿ ಮುಂದುವರಿದಿದ್ದು, ಇಂದು ಅಂತಿಮವಾಗಿ ಶಿಕ್ಷೆ ಪ್ರಕಟಿಸಲಾಗಿದೆ ಎಂದು ಎನ್‌ಐಎ ಕೋರ್ಟ್ ತಿಳಿಸಿದೆ.



